ತಪ್ಪು ತಪ್ಪೇ.. ಹೆಣ್ಣು ಹೆಣ್ಣೇ.. : ದರ್ಶನ್ ವಿರುದ್ಧ ಸಿಟ್ಟಿಗೆದ್ದ ಮಹಿಳಾ ಆಯೋಗದ ಅಧ್ಯಕ್ಷೆ
ಬೆಂಗಳೂರು: ಇತ್ತಿಚೆಗೆ ನಟ ದರ್ಶನ್ ಹೆಣ್ಣು ಮಕ್ಕಳ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದರು. ಇವತ್ತು ಇವಳಿರುತ್ತಾಳೆ. ನಾಳೆ ಅವಳಿರುತ್ತಾಳೆ ಎಂದು ಭಾಷಣದ ಬರದಲ್ಲಿ ಹೇಳಿದ್ದರು. ಬಳಿಕ ಈ ಹೇಳಿಕೆ ಖಂಡಿಸಿ, ಮಹಿಳೆಯರು ಹೋರಾಟಕ್ಕೆ ಇಳಿದಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ಕೂಡ ನೋಟೀಸ್ ನೀಡಿದೆ.
ದರ್ಶನ್ ಅವರ ಹೇಳಿಕೆಯ ಬಗ್ಗೆ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು, ನಮಗೆ ನಿರ್ದಿಷ್ಟ ಕಾನೂನು ಎಂದು ಇರುತ್ತದೆ. ಅದರ ಪ್ರಕಾರವಾಗಿಯೇ ಮೊದಲು ಸ್ಪಷ್ಟನೆ ಕೇಳುತ್ತೀವಿ. ನಟ ದರ್ಶನ್ ಅವರಿಗೆ ಈ ಸಂಬಂಧ ನೋಟೀಸ್ ನೀಡಿದ್ದೇವೆ. ಅದಕ್ಕೆ ಉತ್ತರ ನೀಡುವುದಕ್ಕೆ ಏಳು ದಿನಗಳ ಕಾಲಾವಕಾಶ ಕೂಡ ಕೊಟ್ಟಿದ್ದೇವೆ. ನೋಟೀಸ್ ನೀಡಿ ಎರಡು ದಿನ ಕಳೆದಿದೆ. ಇನ್ನು ಐದು ದಿನ ಬಾಕಿ ಇದೆ. ಅಷ್ಟರಲ್ಲಿ ಅದಕ್ಕೆ ಸ್ಪಷ್ಟ ಉತ್ತರ ನೀಡಬೇಕು. ಇಲ್ಲವಾದರೆ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಕಾನೂನಿನ ಮುಂದೆ ಎಲ್ಲರು ಒಂದೇ. ಎಲ್ಲರೂ ತಲೆ ತಗ್ಗಿಸಲೇಬೇಕು. ಸಾರ್ವಜನಿಕ ಸಭೆಯೊಂದರಲ್ಲಿ ಇವತ್ತು ಇವಳಿರದತಾಳೆ, ನಾಳೆ ಅವಳಿರ್ತಾಳೆ ಎಂದು ಮಾತನಾಡಿದ್ದಾರೆ. ಈ ಬಗ್ಗೆ ಗೌಡ್ತಿಯರ ಸೇನೆಯಿಂದ ಮಹಿಳಾ ಆಯೋಗಕ್ಕೆ ದೂರು ಬಂದಿದೆ. ಅಧಿಕಾರಿಗಳ ಜೊತೆಗೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಮನೆಗೆ ನೋಟೀಸ್ ನೀಡಲು ಹೋದಾಗ ಯಾರು ತೆಗೆದುಕೊಂಡಿರಲಿಲ್ಲ. ಅವರ ಪಿಎ ಬಂದು ಸೈನ್ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ತಪ್ಪು ತಪ್ಪೇ, ಹೆಣ್ಣು ಹೆಣ್ಣೇ. ಸಾರ್ವಜನಿಕವಾಗಿ ಹೆಣ್ಣು ಮಕ್ಕಳ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಬಾರದು. ಕಾನೂನು ತುಂಬಾ ಕಠಿಣವಾಗಿದೆ ಎಂದಿದ್ದಾರೆ.