ಉತ್ತರ ಕನ್ನಡದಲ್ಲಿ ಮಂಗನಬಾವು : ಜನರಲ್ಲಿ ಹೆಚ್ಚಾಯ್ತು ಆತಂಕ..!
ಕಾರವಾರ: ರಾಜ್ಯದಲ್ಲಿ ಮಂಗನಬಾವು ಕಾಯಿಲೆ ಜನರಿಗೆ ಆತಂಕ ತಂದೊಡ್ಡಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಬೃಂದಾವನ ವಸತಿ ಬಡಾವಣೆಯಲ್ಲಿನ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಮಂಗನಬಾವು ಕಾಯಿಲೆಯ ಅಬ್ಬರ ಜೋರಾಗಿತ್ತು. ಇಲ್ಲಿನ 6 ರಿಂದ 10ನೇ ತರಗತಿ ಮಕ್ಕಳಲ್ಲಿ ಕಳೆದ ನಾಲ್ಲೈದು ದಿನಗಳಲ್ಲಿ ಶೀತ, ಜ್ಚರ, ಕೆಮ್ಮಯ ಹಾಗೂ ಮುಖದ ಬಾವು ಕಾಣಿಸಿಕೊಂಡಿದೆ. ಇದಾದ ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.
ಆದರೆ ಮಂಗನಬಾವು ಕಾಯಿಲೆಯಿಂದ ಜನ ಆತಂಕಗೊಂಡಿದ್ದಾರೆ. ಯಾಕಂದ್ರೆ ಈ ಕಾಯಿಲೆ ಬಹಳ ಬೇಗನೇ ಜನರಿಗೆ ಹರಡುತ್ತದೆ. ಎರಡು ವಾರದಿಂದ ಒಬ್ಬರಿಂದ ಒಬ್ಬರಿಗೆ ಹರಡಿ ಈಗ ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆಯಾಗಿತ್ತು. ಮತ್ತಷ್ಟು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈಗ ಸೋಂಕಿತರ ಸಂಖ್ಯೆ ದಿಢೀರನೆ 75ಕ್ಕೆ ತಲುಪಿದೆ.
ವಸತಿ ಶಾಲೆಯ ಮಕ್ಕಳಲ್ಲಿಯೇ ಹೆಚ್ಚಿನ ಸೋ.ಮಕಿತರು ಇದ್ದು, ಅವರಿಗೆಲ್ಲಾ ಚಿಕಿತ್ಸೆ ಕೊಡಿಸಿ ಕಳುಹಿಸಲಾಗಿದೆ. ಆದರೆ ವಸತಿ ಶಾಲೆಯಲ್ಲಿ 200ಕ್ಕೂ ಹೆಚ್ಚಿನ ಮಕ್ಕಳು ಇದ್ದು, ಉಳಿದ ಮಕ್ಕಳಿಗೂ ಸೋಂಕು ತಗುಲಿರುವ ಸಾಧ್ಯತೆ ಇದೆ. ಸೋಂಕು ಕಾಣಿಸಿಕೊಂಡ ಮಕ್ಕಳ ಪೋಷಕರನ್ನು ಕರೆಸಿ, ಅವರನ್ನು ಮನೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಗನಬಾವು ಕಾಯಿಲೆ ನೀರು ಹಾಗೂ ಸೋಂಕಿತರ ಸಂಪರ್ಕದಿಂದ ಹರಡುತ್ತದೆ. ಆರಂಭದಲ್ಲಿ ಕೆಮ್ಮು, ಜ್ವರ, ಶೀತ ಕಾಣಿಸಿಕೊಳ್ಳುತ್ತದೆ. ಬಳಿಕ ಮುಖದ ಮೇಲೆ ಬಾವು ಕಾಣಿಸಿಕೊಳ್ಳುತ್ತದೆ. ತೀರಾ ನೋವುಂಟು ಮಾಡುತ್ತದೆ. ಹೀಗಾಗಿ ಸೋಂಕಿತರಿಂದ ಜನರು ಕೂಡ ದೂರವಿರಬೇಕಾಗುತ್ತದೆ. ಎಚ್ಚರದಿಂದ ಇರಬೇಕಾಗುತ್ತದೆ. ಸದ್ಯ ಉತ್ತರ ಕನ್ನಡದಲ್ಲಿ ಆರೋಗ್ಯ ಇಲಾಖೆ ಕಡೆಯಿಂದ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ.