ರಾಮಲಲ್ಲಾ ಮೂರ್ತಿ ಹಿಂದಿದೆ ಕಣ್ಣೀರ ಕಥೆ : ಮೂರ್ತಿಗೆ ಕಲ್ಲು ಕೊಟ್ಟಿದ್ದ ಗುತ್ತಿಗೆದಾರನಿಗೆ 80 ಸಾವಿರ ದಂಡ..!
ಮೈಸೂರು: ನಿನ್ನೆಯಷ್ಟೇ ರಾಮಲಲ್ಲಾ ಮೂರ್ತಿಯ ಉದ್ಘಾಟನೆಯಾಗಿದೆ. ಇಡೀ ವಿಶ್ವದ ಹಿಂದೂಗಳೆಲ್ಲಾ ಹೆಮ್ಮೆ ಪಟ್ಟಿದ್ದಾರೆ. ಕಣ್ಣು ತೆರೆದ ರಾಮಲಲ್ಲಾನನ್ನು ಕಂಡು ಸಂತಸಗೊಂಡಿದ್ದಾರೆ. ಭಕ್ತಿ ಭಾವದಿಂದ ಕಣ್ತುಂಬಿಕೊಂಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ರಾಮಲಲ್ಲಾ ಮೂರ್ತಿ ಕೆತ್ತಲು ಕಲ್ಲು ನೀಡಿದ ಗುತ್ತುಗೆದಾರ ಸಂಕಷ್ಟದಲ್ಲಿರುವುದು ಬೆಳಕಿಗೆ ಬಂದಿದೆ.
ಖಾಸಗಿ ಚಾನೆಲ್ ಒಂದು ಮಾಡಿರುವ ಚಿಟ್ ಚಾಟ್ ನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಗುತ್ತಿಗೆದಾರ ಶ್ರೀನಿವಾಸ್ ರಾಮಶಿಲೆ ನೀಡಿದ್ದಾರೆ. ಭೂ ಮಾಲೀಕ ರಾಮದಾಸ್ ಅವರು ಭೂಮಿ ಒಳಗಿದ್ದ ಬಂಡೆ ತೆಗೆಯುವಂತೆ ಶ್ರೀನಿವಾಸ್ ಅವರಿಗೆ ಗುತ್ತಿಗೆ ನೀಡಿದ್ದರಂತೆ. ಆ ಕಲ್ಲನ್ನು ಹೊರತೆಗೆದು ಜಮೀನಿನ ಪಕ್ಕದಲ್ಲಿಯೇ ಇಟ್ಟಿದ್ದರಂತೆ. ಅದೇ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳು ಗಣಿಗಾರಿಕೆ ಅಂತ ಹೇಳಿ 80 ಸಾವಿರ ದಂಡ ಹಾಕಿದ್ದಾರಂತೆ. ಮೈಸೂರಿನ ಹಾರೋಹಳ್ಳಿ-ಗುಜ್ಜೆಗೌಡನಪುರ ಗ್ರಾಮದ ನಿವಾಸಿಯಾಗಿರುವ ಗುತ್ತಿಗೆದಾರ ಶ್ರೀನಿವಾಸ್ ಆ ದಂಡವನ್ನು ಕಟ್ಟಿದ್ದಾರಂತೆ.
ವರಮಹಾಲಕ್ಷ್ಮೀ ಹಬ್ಬದ ದಿನವೇ ಇಲಾಖೆಗೆ ದಂಡ ಕಟ್ಟಿರುವ ಶ್ರೀನಿವಾಸ್, ತನ್ನ ಹೆಂಡತಿಯ ಒಡವೆಯನ್ನು ಅಡವಿಟ್ಟು ಹಣ ಒದಗಿಸಿದ್ದರಂತೆ. ಅಂದು ದಂಡ ಕಟ್ಟಿದ್ದ ಶಿಲೆಯ ಇಂದು ರಾಮಲಲ್ಲಾ ಮೂರ್ತಿಯಾಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ಈವರೆಗೂ ಯಾರೂ ಸಹಾಯ ಮಾಡಿಲ್ಲ. ರಾಮಲಲ್ಲಾ ವಿಗ್ರಹಕ್ಕೆ ಶಿಲೆ ತೆಗೆದುಕೊಟ್ಟ ನನ್ನ ಕಷ್ಟ ಇನ್ನು ತೀರಿಲ್ಲ. ಈಗಲಾದರೂ ಯಾರಾದರೂ ಸಹಾಯ ಮಾಡುತ್ತಾರಾ ಎಂಬ ನಿರೀಕ್ಷೆಯಲ್ಲಿದ್ದೀನಿ ಎಂದು ಗುತ್ತಿಗೆದಾರ ಶ್ರೀನಿವಾಸ್, ಖಾಸಗಿ ಚಾನೆಲ್ ಒಂದಕ್ಕೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.