ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ..!
ಬಳ್ಳಾರಿ: ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವು ಬೆಚ್ಚಿ ಬೀಳುವಂತೆ ಮಾಡಿದೆ. ಬ್ಯಾಕ್ ಟು ಬ್ಯಾಕ್ ಸಿಜೇರಿಯನ್ ಆದವರೇ ಸಾವನ್ನಪ್ಪುತ್ತಿದ್ದಾರೆ. ಈ ಸಾವು ಖಂಡಿಸಿ ಇಂದು ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ್ದಾರೆ. ಶ್ರೀರಾಮುಲು ನೇತೃತ್ವದಲ್ಲಿ ಪ್ರತಿಭಟನೆ ಕೂಡ ನಡೆದಿದೆ. ಈ ವೇಳೆ ಇಷ್ಟೊಂದು ಸಾವಾದರೂ ಆರೋಗ್ಯ ಸಚಿವರು ಭೇಟಿ ಮಾಡಿಲ್ಲ ಎಂದೇ ಆರೋಪ ಮಾಡಿದ್ದರು ಈ ಬೆನ್ನಲ್ಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಬಳ್ಳಾರಿಗೆ ಭೇಟಿ ನೀಡಿದ್ದು, ಬೀಮ್ಸ್ ನಲ್ಲಿ ಪರಿಶೀಲನೆ ನಡೆಸಿದ್ದಾರೆ
ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಐವಿ ಫ್ಲೂಯೆಡ್ ಕಂಪನಿ ವಿರುದ್ದ ಪ್ರಾಸಿಕ್ಯೂಷನ್ ಗೆ ಹೋಗುತ್ತಿದ್ದೇವೆ. ಬಾಣಂತಿಯರ ಸಾವಿನ ಬಗ್ಗೆ ಸಂಪೂರ್ಣ ತನಿಖೆಯಾಗಲಿದೆ. ಬಾಣಂತಿಯರ ದಿಢೀರ್ ಸಾವಾಗಿದೆ. ಈ ಸಂಬಂಧ ವೈದ್ಯರಿಂದ ವರದಿ ಕೇಳಿದ್ದೇವೆ. ಐವಿ ಫ್ಲುಯೆಡ್ ಮೇಲೆ ಅನುಮಾನವಿತ್ತು. ಲ್ಯಾಬ್ ನಲ್ಲಿ ಟೆಸ್ಟ್ ಮಾಡಲಾಗಿತ್ತು. ಟೆಸ್ಟ್ ವರದಿ ಬಂದ ಬಳಿಕ ಆ ಔಷಧಿಯನ್ನು ನಿಷೇಧ ಮಾಡಲಾಗಿದೆ. ಆದರೆ ಐವಿ ಫ್ಲುಯೆಡ್ ಸರಿ ಇದೆ ಅಂತ ಕೇಂದ್ರ ಲ್ಯಾಬ್ ವರದಿ ನೀಡಿದೆ.
ಐವಿ ಫ್ಲೂಯೆಡ್ ಬಗ್ಗೆ ನಮಗೂ ಹಿಂಜರಿಕೆಯಿತ್ತು. ಈ ಬಗ್ಗೆ ಸಂಶಯವಿದೆ. ಈಗಾಗಲೇ ಎಲ್ಲಾ ಆಸ್ಪತ್ರೆಗಳಲ್ಲೂ ಇದರ ಬಳಕೆಯನ್ನು ನಿಲ್ಲಿಸಿದ್ದೇವೆ. 327 ಬಾಣಂತಿಯರ ಸಾವು ಆಡಿಟ್ ಆಗಲಿದೆ. ಸತ್ಯ ಗೊತ್ತಾಗಲಿದೆ. ಸಿಎಂ ಹಾಗೂ ನಾನು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇವೆ. ವಿರೋಧ ಪಕ್ಷದವರಾಗಿ ನೀವೂ ಪ್ರತಿಭಟನೆ ಮಾಡುವುದು ಸರಿಯಿದೆ. ಇದು ಭಾವನಾತ್ಮಕ, ಮಾನವೀಯತೆಯ ವಿಚಾರ. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.