ಬಿಕೆ ಹರಿಪ್ರಸಾದ್ ಚಡ್ಡಿ ವಿಚಾರಕ್ಕೆ ಪ್ರಹ್ಲಾದ್ ಜೋಶಿ ಗರಂ..!
ಹುಬ್ಬಳ್ಳಿ: ಸಚಿವ ಸ್ಥಾನ ಸಿಗದೆ ಇರುವ ಕಾರಣಕ್ಕೆ ಬಿಕೆ ಹರಿಪ್ರಸಾದ್ ಕಾಂಗ್ರೆಸ್ ನಲ್ಲಿ ಕೆಂಡಾಮಂಡಲರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ಇತ್ತಿಚೆಗೆ ಪರೋಕ್ಷವಾಗಿಯೂ ಕಿಡಿಕಾರಿದ್ದರು. ಪಂಚೆ ಹಾಕಿಕೊಂಡು, ಹ್ಯೂಬ್ಲೋಟ್ ವಾಚ್ ಕಟ್ಟಿಕೊಂಡು, ಒಳಗೆ ಖಾಕಿ ಚಡ್ಡಿ ಹಾಕಿಕೊಂಡು, ತಾನೂ ಸಮಾಜವಾದಿ ಎಂದು ಹೇಳಿದರೆ ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು.
ಈ ಚಡ್ಡಿ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ. ಒಳಜಗಳ ಜಾಸ್ತಿಯಾಗಿದೆ. ಸಿದ್ದರಾಮಯ್ಯ ಅವರು ಚಡ್ಡಿ ಹಾಕಿದ್ದಾರೆಂದು ಹರಿಪ್ರಸಾದ್ ಹೇಳಿದ್ದಾರೆ. ಇವರು ಚಡ್ಡಿ ಹಾಕಿದ್ದಾರೋ..? ಇಲ್ಲವೋ..? ಗೊತ್ತಿಲ್ಲ. ಬಿ ಕೆ ಹರಿಪ್ರಸಾದ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.
ಹರಿಪ್ರಸಾದ್ ಅವರು ಬಿಜೆಪಿಗೆ ಬೈದಿದ್ದಾರೆ. ಎಲ್ಲವನ್ನು ಮಾತನಾಡಿ, ಕಡೆಗೆ ಬಿಜೆಪಿಗೆ ಬೈದಿದ್ದಾರೆ. ಕಾಂಗ್ರೆಸ್ ನಲ್ಲಿ ಅವರ ವಿರುದ್ಧ ಮಸಲತ್ತು ಮಾಡುವವರ ವಿರುದ್ಧ ಮಾತನಾಡುವ ತಾಕತ್ತು ಅವರಿಗೆ ಇಲ್ಲ. ಈಡಿಗ ಸಮುದಾಯದವರು ಹರಿಪ್ರಸಾದ್ ಅವರನ್ನು ಗುರುತಿಸಿದೆ. ಅದರ ವಿರುದ್ಧ ಸಿಎಂ ಸಿದ್ದರಾಮಯ್ಯ ಸಮಾವೇಶ ಮಾಡುತ್ತಿದ್ದಾರೆ. ಹೀಗಾಗಿ ಅವರು ಎಷ್ಟು ಪುಟಿತಾರೆ ನೋಡೋಣಾ ಎಂದಿದ್ದಾರೆ.
ಪ್ರಧಾನಿ ಮೋದಿ ಅವರು ನೀಡುವ ಅಕಗಕಿ ಬಿಟ್ಟು ಒಂದು ಕಾಳು ಅಕ್ಕಿಯನ್ನು ರಾಜ್ಯ ಸರ್ಕಾರ ನೀಡಿಲ್ಲ. ಅದನ್ನೇ ಅನ್ನಭಾಗ್ಯ ಯೋಜನೆ ಎನ್ನುತ್ತಾರೆ. ಸರ್ಕಾರ ವಿದ್ಯುತ್ ಕೊಡುತ್ತಿಲ್ಲ ಅಂತ ರೈತರೇ ಹೇಳುತ್ತಾರೆ. ಸರ್ಕಾರದಲ್ಲಿ ಪರಸ್ಪರ ಜಗಳ - ಕೆಸರು ಎರಚಾಟ ಜಾಸ್ತಿ ಆಗಿದೆ. ಇದರಿಂದ ಅಭಿವೃದ್ಧಿಯ ಮೇಲೆ ಹೊಡೆತ ಬೀಳುತ್ತಿದೆ. ಇದು ಆಡಳಿತದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.