ಪ್ರಧಾನಿ ಮೋದಿ ಸಮ್ಮುಖದಲ್ಲಿ ಮಹಾರಾಷ್ಟ್ರ ಸಿಎಂ ಆಗಿ ಫಡ್ನವಿಸ್ ಪ್ರಮಾಣ ವಚನ ಸ್ವೀಕಾರ
ಸುದ್ದಿಒನ್ |
ಮುಂಬೈನ ಆಜಾದ್ ಮೈದಾನದಲ್ಲಿ ಗುರುವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಆಜಾದ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಸೇನಾ ಮುಖ್ಯಸ್ಥ ಏಕ್ ನಾಥ್ ಶಿಂಧೆ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಮಹಾಯುತಿ ಮೈತ್ರಿಕೂಟದ ಪಕ್ಷಗಳ ನಡುವೆ ಎರಡು ವಾರಗಳ ತೀವ್ರ ಸಂಧಾನದ ನಂತರ ಹೊಸ ಸರ್ಕಾರ ರಚನೆಯಾಗಿದೆ. ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿ ಜೊತೆಗಿನ ಬಿಜೆಪಿ ನೇತೃತ್ವದ ಮಹಾಮೈತ್ರಿಕೂಟ 230 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ ಏಕಾಂಗಿಯಾಗಿ 132 ಸ್ಥಾನಗಳನ್ನು ಗೆದ್ದಿದೆ.
ಸೆಲೆಬ್ರಿಟಿಗಳ ಹಾಜರಾತಿ : ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಚಲನಚಿತ್ರ, ರಾಜಕೀಯ, ವ್ಯಾಪಾರ ಮತ್ತು ಕ್ರೀಡಾ ಕ್ಷೇತ್ರಗಳ ಅನೇಕ ಗಣ್ಯರು ಭಾಗವಹಿಸಿದ್ದರು. ಅವರಲ್ಲಿ ಹಲವಾರು ಕೇಂದ್ರ ಸಚಿವರು, ಆಂದ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು , ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಹಲವು ಮುಖ್ಯಮಂತ್ರಿಗಳು ಇದ್ದರು. ಅಲ್ಲದೆ, ಶಾರುಖ್ ಖಾನ್ , ಸಲ್ಮಾನ್ ಖಾನ್, ಸಂಜಯ್ ದತ್, ಮಾಧುರಿ ದೀಕ್ಷಿತ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಬಾಲಿವುಡ್‌ನ ಪ್ರಮುಖ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಕೂಡ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಖ್ಯಾತ ಉದ್ಯಮಿ ಹಾಗೂ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಕುಟುಂಬ ಸಮೇತ ಉಪಸ್ಥಿತರಿದ್ದರು. ಅಲ್ಲದೆ, ಸುಮಾರು 40 ಸಾವಿರ ಬಿಜೆಪಿ ಬೆಂಬಲಿಗರು ಮತ್ತು ಧಾರ್ಮಿಕ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಫಡ್ನವೀಸ್ ಅವರು 2014 ರಿಂದ 2019 ರವರೆಗೆ ಎರಡನೇ ಅವಧಿಗೆ ಬಿಜೆಪಿ-ಶಿವಸೇನೆ ಸರ್ಕಾರದ ನೇತೃತ್ವ ವಹಿಸಿದ್ದರು. 2019 ರ ಚುನಾವಣೆಯ ನಂತರ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಸಿಎಂ ಹುದ್ದೆಗಾಗಿ ಬಿಜೆಪಿಯೊಂದಿಗೆ ಸಂಬಂಧವನ್ನು ಮುರಿದುಕೊಂಡಾಗ, ಅಜಿತ್ ಪವಾರ್ ಸಹಾಯದಿಂದ ಫಡ್ನವೀಸ್ ಮತ್ತೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಎನ್‌ಸಿಪಿ ಶಾಸಕರಿಂದ ಸಾಕಷ್ಟು ಬೆಂಬಲ ಪಡೆಯಲು ಅಜಿತ್ ಪವಾರ್ ವಿಫಲವಾದ ಕಾರಣ ಈ ಸರ್ಕಾರ ಕೇವಲ 72 ಗಂಟೆಗಳ ಕಾಲ ನಡೆಯಿತು. ನಂತರ, ಶಿವಸೇನೆ ವಿಭಜನೆಯಿಂದಾಗಿ ಶಿಂಧೆ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಫಡ್ನವೀಸ್ ಉಪ ಮುಖ್ಯಮಂತ್ರಿಯಾಗಿದ್ದರು.