ಏಪ್ರಿಲ್ ತಿಂಗಳಿಂದ ಹೊಸ ರೇಷನ್ ಕಾರ್ಡ್ ವಿತರಣೆ : ಸಚಿವ ಕೆ.ಹೆಚ್. ಮುನಿಯಪ್ಪ
ಬೆಂಗಳೂರು: ರೇಷನ್ ಕಾರ್ಡ್ ಗಾಗಿ ಎಷ್ಟೋ ಲಕ್ಷ ಜನ ಅರ್ಜಿ ಸಲ್ಲಿಕೆ ಮಾಡುತ್ತಿರುತ್ತಾರೆ. ಆದರೆ ಎಲ್ಲರಿಗೂ ರೇಷನ್ ಕಾರ್ಡ್ ಸಿಕ್ಕಿಲ್ಲ. ಇದೀಗ ಆಹಾರ ಸಚಿವ ಕೆ ಎಚ್ ಮುನಿಯಪ್ಪ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಏಪ್ರಿಲ್ ಒಂದರಿಂದ ಹೊಸ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗುವುದು ಎಂದಿದ್ದಾರೆ. ಈ ಮೂಲಕ ಹೊಸ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದವರಿಗೆ ಸರ್ಕಾರ ಸಂತದ ಸುದ್ದಿ ನೀಡಿದೆ.
ಆರೋಗ್ಯ ತುರ್ತು ಕಾರಣಕ್ಕೆ 744 ಜನರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿತ್ತು. ಆರೋಗ್ಯ ಸಮಸ್ಯೆಯ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಕಾರ್ಡ್ ವಿತರಣೆ ಮಾಡಲಾಗಿತ್ತು. ಹೊಸ ಪಡಿತರ ಚೀಟಿಗಾಗಿ ಇಲ್ಲಿಯವರೆಗೂ 2.95 ಲಕ್ಷ ಅರ್ಜಿ ಸಲ್ಲಿಕೆಯಾಗಿರುವುದು ಇನ್ನೂ ಬಾಕಿ ಉಳಿದಿದೆ. ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೂ 57 ಸಾವಿರ ಹೊಸ ಕಾರ್ಡ್ ಗಳನ್ನು ವಿತರಣೆ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿಗಳನ್ನು ಚಾಲ್ತಿಗೆ ತಂದಿದೆ. ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಯ ಲಾಭ ಪಡೆಯುವವರು ರೇಷನ್ ಕಾರ್ಡ್ ಹೊಂದಿರಲೇಬೇಕು. ಆದರೆ ರೇಷನ್ ಕಾರ್ಡ್ ಸಿಗದೆ ಕೆಲವರು ಪರದಾಡುವಂತಾಗಿದೆ. ಹೀಗಾಗಿ ಏಪ್ರಿಲ್ ಒಂದರಿಂದ ಹೊಸ ಕಾರ್ಡ್ ಕೊಡಲು ನಿರ್ಧಾರ ಮಾಡಲಾಗಿದೆ.
ಹಲವು ತಿಂಗಳಿನಿಂದ ಕೂಡ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಿ ಎಂಬ ಬೇಡಿಕೆ ಇತ್ತು. ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡುವುದು ಕಳೆದ ಒಂದು ವರ್ಷದ ಹಿಂದೆ ಸ್ಥಗಿತಗೊಂಡಿತ್ತು. ವಿಧಾನಸಭಾ ಚುನಾವಣೆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಶುರುವಾಗುತ್ತಿರುವುದು ಹಲವರಿಗೆ ಸಂತಸ ತಂದಿದೆ.