ರಾತ್ರೋ ರಾತ್ರಿ ದೇವೇಗೌಡ್ರನ್ನು ಭೇಟಿಯಾದ ಸಿಪಿ ಯೋಗೀಶ್ವರ್..!
ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ, ಜೆಡಿಎಸ್ ನಾಯಕರು ಆಕ್ಟೀವ್ ಆಗಿದ್ದಾರೆ. ಅದರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಬಿಜೆಪಿ ಹಿರಿಯರೆಲ್ಲಾ ದೇವೇಗೌಡರ ಮನೆ ಹಾಗೂ ಕುಮಾರಸ್ವಾಮಿ ಅವರ ತೋಟದ ಮನೆಗೆ ದಾಂಗುಡಿ ಇಡುತ್ತಿದ್ದಾರೆ. ಇದೀಗ ಸಿಪಿ ಯೋಗೀಶ್ವರ್ ದಿಢೀರನೆ ದೇವೇಗೌಡರ ಮನೆಗೆ ಭೇಟಿ ನೀಡಿ, ಚರ್ಚೆ ನಡೆಸಿ ಬಂದಿದ್ದಾರೆ.
ರಾಮನಗರದಲ್ಲಿ ಜೆಡಿಎಸ್ ಗೆ ಪ್ರಬಲ ಪೈಪೋಟಿ ನೀಡಿದ್ದೇ, ಸಿಪಿ ಯೋಗೀಶ್ವರ್ ಅವರು. ಸಿಕ್ಕ ಸಿಕ್ಕ ಸಮಯದಲ್ಲೆಲ್ಲಾ ಯೋಗೀಶ್ವರ್ ಅವರು, ಕುಮಾರಸ್ವಾಮಿ ಅವರನ್ನು, ಕುಮಾರಸ್ವಾಮಿ ಅವರು ಯೋಗೀಶ್ವರ್ ಅವರನ್ನು ಏಕವಚನದಲ್ಲಿಯೇ ದಾಳಿ ನಡೆಸಿದ್ದರು. ಈಗ ಮೈತ್ರಿಯಾದ ಮೇಲೆ ಎಲ್ಲವೂ ಉಲ್ಟಾ ಆಗಿದೆ. ಸಮಾಧಾನ ಹೆಚ್ಚಾಗಿದೆ. ಜೊತೆಗೂಡಿ ಕೆಲಸ ಮಾಡುವ ಮನಸ್ಥಿತಿ ನಿರ್ಮಾಣವಾಗಿದೆ. ಈ ಬೆನ್ನಲ್ಲೇ ಸಿಪಿ ಯೋಗೀಶ್ವರ್ ದೊಡ್ಡಗೌಡರ ಮನೆಗೆ ಬಂದಿದ್ದಾರೆ.
ಪದ್ಮನಾಭನಗರದ ದೊಡ್ಡಗೌಡರ ನಿವಾಸಕ್ಕೆ ಭೇಟಿ ನೀಡಿದ ಯೋಗೀಶ್ವರ್, ಸುಮಾರು ಗಂಟೆಗಳ ಕಾಲ ದೇವೇಗೌಡರ ಬಳಿ ಚರ್ಚೆ ನಡೆಸಿದ್ದಾರೆ. ದೊಡ್ಡಗೌಡರು ಕೂಡ, ನಿನ್ನ ಜೊತೆಗೆ ನಾವಿದ್ದೀವಿ ಎಂದು ಹೇಳಿ ಕಳುಹಿಸಿದ್ದಾರಂತೆ. ಈ ಸಂಬಂಧ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸಿಪಿ ಯೋಗೀಶ್ವರ್, 'ಕರುನಾಡಿನ ಹೆಮ್ಮೆ, ಗೌರವಾನ್ವಿತ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿಮಾಡಿ ಆಶೀರ್ವಾದ ಪಡೆಯಲಾಯಿತು. ನಾಡಿನ ರೈತರು, ಕೃಷಿ ಕಾರ್ಮಿಕರ ಬಗ್ಗೆ ಈ ಇಳಿ ವಯಸ್ಸಿನಲ್ಲೂ ದೇವೇಗೌಡರಿಗೆ ಇರುವ ಕಳಕಳಿ ಅನುಕರಣೀಯ. 6 ದಶಕಗಳ ಸುದೀರ್ಘ ಸಾರ್ವಜನಿಕ ಜೀವನ ಪೂರೈಸಿರುವ ಶ್ರೀ ದೇವೇಗೌಡರ ಜ್ಞಾನ, ಅನುಭವ ನಮ್ಮೆಲ್ಲರಿಗೂ ಪ್ರೇರಣಾದಾಯಿ' ಎಂದು ಬರೆದುಕೊಂಡಿದ್ದಾರೆ.