ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!
ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ ಎಂದು ಇದೀಗ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಿಟ್ಟಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ದಾದಾ ಪೀರ್ ಮಾಡಿರುವ ವಿಡಿಯೋದಲ್ಲಿ ಏನಿದೆ ?
ಜನನಿಬಿಡ ಪ್ರದೇಶದಲ್ಲಿ ಗೋವುಗಳನ್ನು ಕೊಯ್ದು ಗಲೀಜು ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಹಿರಿಯೂರು ನಗರದಲ್ಲಿ ಅಟ್ಟಹಾಸ ಮುಂದುವರೆದಿದ್ದು, ಯಾರು ಹೇಳೋರು ಕೇಳೋರು ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.
ಹಿರಿಯೂರು ಪೊಲೀಸ್ ಇಲಾಖೆಯಿಂದ ಜಿಲ್ಲಾ ಎಸ್ಪಿ ಕಛೇರಿವರೆಗೂ, ನಗರಸಭೆಯಿಂದ ಜಿಲ್ಲಾ ಆರೋಗ್ಯಾಧಿಕಾರಿಗಳಿಗೂ ಅರ್ಜಿ, ದೂರು ಕೊಟ್ಟಿದ್ದೆ. ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆದರೆ ಅದು ಭರವಸೆಯಾಗಿಯೇ ಉಳಿಯಿತು. ಎರಡು ದಿನ ನಿಲ್ಲಿಸುತ್ತಾರೆ. ನಂತರ ಮತ್ತೆ ಮೊದಲಿನಂತೆ ಕಸಾಯಿ ಖಾನೆ ನಡೆಯುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಯಾರು ಸಹ ಜಾಗರೂಕತೆಯಿಂದ ಕ್ರಮ ಕೈಗೊಳ್ಳದೇ ಬೇಕಾಬಿಟ್ಟಿಯಾಗಿದ್ದು, ಹಿರಿಯೂರಿನಲ್ಲಿ ಅಟ್ಟಹಾಸ ಮಿತಿಮೀರಿದೆ. ಜನರ ಆರೋಗ್ಯ ದೃಷ್ಟಿಯಿಂದ ಈಗಲಾದರೂ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಇದುವರೆಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಮಾಧ್ಯಮಗಳ ಮೂಲಕವಾದರೂ ಇಂತಹ ಅಕ್ರಮ ಕಸಾಯಿಖಾನೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಕಾನೂನಿನ ಮೂಲಕವಾದರೂ ಸಹ ಕಸಾಯಿ ಖಾನೆಯನ್ನು ತೆರವು ಗೊಳಿಸಬೇಕು. ನಮ್ಮ ವಾರ್ಡ್ ನಲ್ಲಿ ಇದರಿಂದ ಮಕ್ಕಳ ಮೇಲೆ ಆರೋಗ್ಯದ ದುಷ್ಪರಿಣಾಮ ಬೀರುವ ಸಾಧ್ಯತೆಯಿದ್ದು ಮರಣ ಹೊಂದುವ ಸಾಧ್ಯತೆ ಇರುತ್ತದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ದಾದಾಪೀರ್ ವಿನಂತಿ ಮಾಡಿಕೊಂಡಿದ್ದಾರೆ.