T20 ವಿಶ್ವಕಪ್ ಗೂ ಮುನ್ನವೇ ಕೋಚ್ ರಾಹುಲ್ ದ್ರಾವಿಡ್ ಅವಧಿ ಮುಕ್ತಾಯ.. ಮುಂದೇನು ಕಥೆ..?
ಸದ್ಯಕ್ಕೆ ಐಪಿಎಲ್ ನಡೆಯುತ್ತಿದೆ. ಈ ಐಪಿಎಲ್ ಪಂದ್ಯಗಳು ಮುಗಿಯುತ್ತಿದ್ದಂತೆ ಟಿ20 ವಿಶ್ವಕಪ್ ಆರಂಭವಾಗಲಿದೆ. ಜೂನ್ 2ರಿಂದ ವಿಶ್ವಕಪ್ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಆಘಾತಕಾರಿ ಸುದ್ದಿಯೊಂದು ಸಿಕ್ಕಿದೆ. ಬಿಸಿಸಿಐ ನಿಂದ ಕೋಚ್ ಬದಲಾವಣೆಯ ಮಾಹಿತಿ ಸಿಕ್ಕಿದೆ.
ಕನ್ನಡಿಗ ರಾಹುಲ್ ದ್ರಾವಿಡ್ ಸದ್ಯ ಟೀಂ ಇಂಡಿಯಾದ ಕೋಚ್ ಆಗಿದ್ದಾರೆ. ಆದರೆ ಅವರ ಅವಧಿ ಜೂನ್ ತಿಂಗಳ ಒಳಗೆ ಅಂತ್ಯವಾಗುತ್ತಿದೆ. ಈ ಸಂಬಂಧ ಜಾಹೀರಾತು ನೀಡುವುದಾಗಿ ಹೇಳುತ್ತಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಬಗ್ಗೆ ಮಾತನಾಡಿದ್ದು, ನೂತನ ಕೋಚ್ ಆಯ್ಕೆಗಾಗಿ ಬಿಸಿಸಿಐ ಈಗಾಗಲೇ ಜಾಹೀರಾತನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಮತ್ತೊಮ್ಮೆ ಕೋಚ್ ಆಗಬೇಕೆಂದು ಬಯಸಿದರೆ ಕೋಚ್ ರಾಹುಲ್ ದ್ರಾವಿಡ್ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಜಯ್ ಶಾ ಸ್ಪಷ್ಟಪಡಿಸಿದ್ದಾರೆ.
ಜಯ್ ಶಾ ಅವರ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಟಿ20 ವಿಶ್ವಕಪ್ ಗೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದೆ. ಹೀಗಿರುವಾಗ ಈಗ ಕೋಚ್ ಬದಲಾವಣೆ ಮಾಡುವುದು ಎಷ್ಟು ಸರಿ ಎಂಬುದು ಟೀಂ ಇಂಡಿಯಾ ಅಭಿಮಾನಿಗಳ ಪ್ರಶ್ನೆಯಾಗಿದೆ. ಅರ್ಜಿ ಸಲ್ಲಿಕೆಗೆ ಅವಕಾಶವಿರುವ ಕಾರಣ, ರಾಹುಲ್ ದ್ರಾವಿಡ್ ಅವರೇ ಕೋಚ್ ಆಗಿ ಮುಂದುವರೆಯುತ್ತಾರಾ ಅಥವಾ ವಿದೇಶಿಗರಿಗೆ ಮಣೆ ಹಾಕುತ್ತಾ ಎಂಬುದನ್ನು ಕಾದು ನೋಡಬೇಕಿದೆ.