ಚನ್ನಪಟ್ಟಣ ಬೈ ಎಲೆಕ್ಷನ್ : ಡಿಕೆ ಶಿವಕುಮಾರ್ ಸ್ಪರ್ಧೆ : ಜನತೆ ಬಳಿ ಹೇಳಿದ್ದೇನು..?
ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ಈಗ ಕೇಂದ್ರ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಈಗ ತೆರವಾಗಿದೆ. ಶಾಸಕ ಸ್ಥಾನಕ್ಕೆ ಈಗ ಬೈ ಎಲೆಕ್ಷನ್ ನಡೆಯಲಿದೆ. ಈಗಾಗಲೇ ಬಿಜೆಪಿಯಿಂದ ಸಿಪಿವೈ ಯೋಗೀಶ್ವರ್ ಅವರು ಚನ್ನಪಟ್ಟಣ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರೆ, ಮಗನ ರಾಜಕೀಯ ಭವಿಷ್ಯದ ಯಶಸ್ಸಿಗಾಗಿ ಕುಮಾರಸ್ವಾಮಿ ಯೋಚನೆ ಮಾಡುತ್ತಿದ್ದಾರೆ. ಚನ್ನಪಟ್ಟಣದಲ್ಲಿ ನಿಖಿಲ್ ಅವರನ್ನು ನಿಲ್ಲಿಸಿ, ಒಮ್ಮೆಯಾದರೂ ಗೆಲ್ಲಿಸಬೇಕೆಂದ ಆಸೆ ಇಟ್ಟುಕೊಂಡಿದ್ದಾರೆ. ಇದೀಗ ಕಾಂಗ್ರೆಸ್ ನಲ್ಲೂ ಚನ್ನಪಟ್ಟಣವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಪ್ಲ್ಯಾನ್ ನಡೆಯುತ್ತಿದೆ. ಹೀಗಾಗಿ ನೇರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಕಣಕ್ಕೆ ಇಳಿದಿದ್ದಾರೆ.
ಇಂದು ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್ ಅವರು, ಚನ್ನಪಟ್ಟಣದ ಜನತೆ ಕುರಿತು ಮಾತನಾಡಿದ್ದಾರೆ. ಈ ಕ್ಷೇತ್ರದ ಜನರ ಋಣ ತೀರಿಸುವುದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ. ಚನ್ನಪಟ್ಟಣದಲ್ಲಿ ಬದಲಾವಣೆ ತರಬೇಕು ಅಂತ ನಾನು ಬಂದಿದ್ದೇನೆ. ಬೆಂಗಳೂರಿನ ರೀತಿಯಲ್ಲಿ ರಾಮನಗರ ಅಭಿವೃದ್ಧಿ ಆಗಬೇಕು. ಇಲ್ಲಿಂದಲೇ ನನ್ನ ರಾಜಕೀಯದ ಹೊಸ ಅಧ್ಯಾಯವನ್ನು ಆರಂಭಿಸುತ್ತೇನೆ ಎಂದು ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಇನ್ನು ಈ ಬಾರಿಯ ಲೋಕಸಭೆಯಲ್ಲಿ ಡಿಕೆ ಸುರೇಶ್ ಸೋಲು ಅನುಭವಿಸಿರುವುದು ಕಾಂಗ್ರೆಸ್ ಗೆ ಮುಜುಗತವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಗೂ ಅದು ಬೇಸರ ತರಿಸಿದೆ. ಈಗ ಚನ್ನಪಟ್ಟಣಕ್ಕೆ ಮತ್ತೆ ನಿಲ್ಲಿಸಿದರೆ, ಸೋಲು ಕಂಡರೆ ಇನ್ನಷ್ಟು ಮುಖಭಂಗವಾಗಲಿದೆ. ಹೀಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಉಪಚುನಾವಣೆಯ ಅಖಾಡಕ್ಕೆ ಇಳಿದಿದ್ದಾರೆ. ಚನ್ನಪಟ್ಟಣದಲ್ಲಿ ಗೆಲ್ಲಲೇಬೇಕೆಂದುಕೊಂಡಿರುವ ಡಿಕೆಶಿ, ಈ ಮೂಲಕ ಸಿಪಿ ಯೋಗೀಶ್ವರ್ ಹಾಗೂ ಕುಮಾರಸ್ವಾಮಿಗೂ ತಿರುಗೇಟು ನೀಡಲು ಸಿದ್ಧರಾಗಿದ್ದಾರೆ.