ಮತ್ತೊಂದು ಗೋದ್ರಾ ಹೇಳಿಕೆ : ಸಿಸಿಬಿ ಪೊಲೀಸರ ವಿಚಾರಣೆಗೆ ಬಿಕೆ ಹರಿಪ್ರಸಾದ್ ಆಕ್ರೋಶ
ಬೆಂಗಳೂರು: ಅಯೋಧ್ಯೆಗೆ ಬಹಳ ಜನ ತೆರಳಲಿದ್ದಾರೆ. ಈ ವೇಳೆ ಹೆಚ್ಚಿನ ರಕ್ಷಣೆ ಬೇಕಾಗುತ್ತದೆ. ಮತ್ತೊಂದು ಗೋದ್ರಾ ಘಟನೆ ನಡೆಯಬಹುದು. ರಕ್ಷಣೆ ನೀಡಿ ಎಂಬ ಹೇಳಿಕೆಯನ್ನು ಬಿಕೆ ಹರಿಪ್ರಸಾದ್ ನೀಡಿದ್ದರು. ಈ ಹೇಳಿಕೆಗೆ ಬಿಜೆಪಿ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕೆಕೆ ಗೆಸ್ಟ್ ಹೌಸ್ ನಲ್ಲಿ ಸಿಸಿಬಿ ಪೊಲೀಸರು, ಬಿಕೆ ಹರಿಪ್ರಸಾದ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಬಿಕೆ ಹರಿಪ್ರಸಾದ್ ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರವೋ ಅಥವಾ ಆರ್ ಎಸ್ ಎಸ್ ಸರ್ಕಾರವೋ ಎಂದು ಕಿಡಿಕಾರಿದ್ದಾರೆ.
ಇದೆ ವೇಳೆ ಪೊಲೀಸರಿಗೂ ಸೂಚನೆ ನೀಡಿದ್ದಾರೆ. ನನಗೆ ಯಾವುದೇ ವಿಐಪಿ ಟ್ರೀಟ್‌ಮೆಂಟ್ ಬೇಡ. ಬೇಕಾದರೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿ. ಬಹಿರಂಗವಾಗಿಯೇ ಮಂಪರು ಪರೀಕ್ಷೆ ನಡೆಸಿ. ನನ್ನ ಜೀವನದಲ್ಲಿ ನನ್ನ ವಿರುದ್ಧ ಯಾವುದೇ ಕೇಸ್ ಇಲ್ಲ. ಕಾಂಗ್ರೆಸ್ ಸರ್ಕಾರವೇ ವಿಚಾರಣೆ ನಡೆಸಿರುವುದು ಆಶ್ಚರ್ಯ ತಂದಿದೆ ಎಂದು ಪೊಲೀಸರಿಗೆ ಹೇಳಿದ್ದಾರೆ.
ವಿಚಾರಣೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಗೋಧ್ರಾ ಹೇಳಿಕೆ ಬಗ್ಗೆ ನಾನು ಬದ್ಧನಾಗಿದ್ದೇನೆ. ಗೋಧ್ರಾ ಘಟನೆಯಂತೆ ಮತ್ತೊಂದು ಘಟನೆ ನಡೆಯುತ್ತದೆ ಎಂದು ನನಗೆ ಮಾಹಿತಿ ಬಂದಿತ್ತು. ಅದನ್ನು ಬಹಿರಂಗವಾಗಿ ತಿಳಿಸಿದ್ದೇನೆ. ಮುಸ್ಲಿಂ ಮಸೀದಿ ಒಡೆದು ಹಾಕುತ್ತೇನೆ ಎಂದಿದ್ದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಮಹಿಳೆಯ ಬಗ್ಗೆ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಆದರೆ ನನ್ನ ವಿರುದ್ಧ ವಿಚಾರಣೆಗೆ ನಮ್ಮ ಸರ್ಕಾರವೇ ಪೊಲೀಸರನ್ನು ಕಳುಹಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.