ಅನಿಯಂತ್ರಿತ ಜೊಲ್ಲು ಸೋರುವಿಕೆ : ಕಾರಣಗಳು ಮತ್ತು ಪರಿಹಾರವೇನು ?
ವಿಶೇಷ ಲೇಖನ : ಡಾ. ಸಂತೋಷ್, ಚಿತ್ರದುರ್ಗ, ಮೊಬೈಲ್ ಸಂಖ್ಯೆ : 9342466936
ಮಕ್ಕಳಿಂದ ಹಿಡಿದು ಹಿರಿಯ ವಯಸ್ಸಿನವರೆಗಿನ ಜನರಲ್ಲಿ ಅನಿಯಂತ್ರಿತ ಜೊಲ್ಲು ಸೋರುವಿಕೆ ಹಾಗೂ ಬಾಯಲ್ಲಿ ತೀವ್ರವಾದ ಜೊಲ್ಲು ಸ್ರವಿಕೆ ಕಂಡುಬರುತ್ತದೆ. ಇದು ಎಲ್ಲರಲ್ಲೂ ಕಂಡು ಬರಬಹುದಾದ ಸರ್ವೇಸಾಮಾನ್ಯವಾದ ಸಮಸ್ಯೆಯಾಗಿದೆ.
ಅನಿಯಂತ್ರಿತ ಜೊಲ್ಲು:
ಮನುಷ್ಯನು ಹುಟ್ಟುವಾಗಲೇ ಜೊಲ್ಲು ಗ್ರಂಥಿಗಳನ್ನು ಪಡೆದೇ ಹುಟ್ಟುವನು. ಜೀರ್ಣಕ್ರಿಯೆಗೆ ಅತ್ಯಾವಶ್ಯಕವಾಗಿ ಬೇಕಾಗುವ ಜೊಲ್ಲನ್ನು ಸ್ರವಿಸುವ ಜೊಲ್ಲು ಗ್ರಂಥಿಗಳು ಹುಟ್ಟಿದಾಗಿನಿಂದ ಸಾಯುವ ತನಕವೂ ಕಾರ್ಯನಿರ್ವಹಿಸುತ್ತವೆ.
ಒಂದು ದಿನ ಇದರ ಕೆಲಸ ನಿಂತರೂ ಆಹಾರದ ಜೀರ್ಣಕ್ರಿಯೆ ನಡೆಯುವುದಿಲ್ಲ. ಬಾಯಿಯ ತೇವಾಂಶ ಕಾಪಾಡಲು,
ಹಲ್ಲು ಹುಳುಕು ಆಗದಂತೆ ತಡೆಯಲು,ಆಹಾರ ನುಂಗಲು, ಮಾತನಾಡಲು, ಆಹಾರ ಜೀರ್ಣವಾಗಲು, ಸೂಕ್ಷ್ಮ ಕ್ರಿಮಿಗಳಿಂದ ಬಾಯಿಯ ಆರೋಗ್ಯ ಕಾಪಾಡಲು ಹತ್ತಾರು ಕೆಲಸಗಳು ಈ ಜೊಲ್ಲಿನಿಂದ ನಡೆಯುತ್ತದೆ.
ಪ್ರತಿದಿನ ಸಾಮಾನ್ಯ ಮನುಷ್ಯರಲ್ಲಿ ಒಂದರಿಂದ ಒಂದೂವರೆ ಲೀಟರ್ ನಷ್ಟು ಜೊಲ್ಲು ಸ್ರವಿಕೆಯಾಗುತ್ತದೆ. ನಾವು ಎಚ್ಚರದ ಸ್ಥಿತಿಯಲ್ಲಿದ್ದಾಗ,ನಮಗೆ ಅರಿವು ಇದ್ದಾಗ ಈ ನಿತ್ಯ ಸ್ರವಿಕೆಯು ಎಂದಿಗೂ ಬಾಯಿಯಿಂದ ತಾನೇ ತಾನಾಗಿ ಹೊರಗೆ ಬರುವುದಿಲ್ಲ. ಬಾಯಿಯ ಹೊರಭಾಗವಾದ ಮೇಲುತುಟಿ ಹಾಗೂ ಕೆಳಗಿನ ತುಟಿಗಳು ಪರಸ್ಪರ ಮೆಸೆದುಕೊಂಡು ಜೊಲ್ಲನ್ನು ಬಾಯಿಯಿಂದ ಹೊರಗೆ ಬರದಂತೆ ತಡೆಯುತ್ತವೆ. ಮಲಗಿದ್ದ ಸ್ಥಿತಿಯಲ್ಲಿ ಶೇಕಡ 80 ರಷ್ಟು ಜೊಲ್ಲುಸ್ರವಿಕೆ ನಿಂತಿರುತ್ತದೆ.
ಆದರೆ ಅನಿಯಂತ್ರಿತ ಜೊಲ್ಲು ಸೋರುವಿಕೆ ಇರುವ ವ್ಯಕ್ತಿಗಳಲ್ಲಿ ಜೊಲ್ಲು ತೀವ್ರ ಪ್ರಮಾಣದಲ್ಲಿ ಹಾಗೂ 2 ಲೀಟರ್ ಗಿಂತ ಜಾಸ್ತಿ ಸ್ರವಿಕೆಯಾಗುತ್ತದೆ. ಇದನ್ನು 'ಸಯಲೋರಿಯ' ಎನ್ನಲಾಗುತ್ತದೆ. ಹೆಚ್ಚು ಜೊಲ್ಲು ಸ್ರವಿಕೆಯಿಂದ ದೈಹಿಕವಾಗಿ ಯಾವುದೇ ತೊಂದರೆ ಆಗಲಿ, ಅನಾರೋಗ್ಯವಾಗಲಿ ಇರುವುದಿಲ್ಲ. ಆದರೆ ಕೆಲವೊಂದು ಬಾರಿ ಜೊಲ್ಲು ಪ್ರಮಾಣವು ತೀವ್ರ ಗತಿಯಲ್ಲಿ ಏರಿಕೆ ಕಂಡು ನಮ್ಮ ಹಿಡಿತವನ್ನು ಬಿಟ್ಟು ಬಾಯಿಂದ ಬರುತ್ತದೆ.ಕೆಲವೊಮ್ಮೆ ಮಲಗಿದ್ದಾಗಲೂ ಈ ಸ್ರವಿಕೆ ವ್ಯಕ್ತಿಯ ಗಮನಕ್ಕೆ ಬಾರದಂತೆ ಮಲಗಿದ್ದ ದಿಂಬು ನೆನೆದುಬಿಡುತ್ತದೆ. ಮಾನಸಿಕವಾಗಿ, ಸಾಮಾಜಿಕವಾಗಿ ಇದು ವ್ಯಕ್ತಿಯನ್ನು ತೀವ್ರವಾಗಿ ಮುಜುಗರ ಪಡಿಸುತ್ತದೆ. ಅತಿ ಸ್ರವಿಕೆಯಿಂದ ಎದುರು ಇರುವ ವ್ಯಕ್ತಿಯ ಮೇಲೆ ಮಾತನಾಡುವಾಗ ಪದೇಪದೇ ಜೊಲ್ಲು ಹಾರಬಹುದು.
ಕಾರಣಗಳೇನು :
* ಸರಿಯಾದ ರೀತಿಯಲ್ಲಿ ಬೆಳವಣಿಗೆಯಾಗದ ತುಟಿ ಹಾಗೂ ಬಾಯಿಯ ಮಾಂಸ ಖಂಡಗಳು ಅಥವಾ ದುರ್ಬಲವಾಗಿರುವ ಬಾಯಿಯ ಮಾಂಸಖಂಡಗಳು.
* ಬಾಯಿಯು ಪದೇ ಪದೇ ಒಣಗುತ್ತಿದೆ ಎಂದು ಅನಿಸಿದಾಗ.
* ಬಾಯಿಯ ಮುಂಭಾಗದ ಬಾಚಿ ಹಲ್ಲು ಕೋರೆಹಲ್ಲು ಮುಂದವಡೆ ಹಲ್ಲುಗಳು ಇಲ್ಲದಿದ್ದಾಗ.
* ಸೆರೆಬ್ರಲ್ ಪಾಲ್ಸಿ.ಮೆದುಳಿನ ಒಂದು ಭಾಗವು ಪಾರ್ಶ್ವ ಪೀಡಿತವಾದಾಗ, ನರಗಳ ದುರ್ಬಲತೆ.
* ಬಾಯಿಯಲ್ಲಿ ಹಲ್ಲಿನ ಸೆಟ್ ಅಥವಾ ಹಲ್ಲಿನ ಕ್ಲಿಪ್ ಗಳನ್ನು ಬಳಸುತ್ತಿರುವಾಗ.
* ಪೂರ್ತಿ ಬಾಯಿಯಲ್ಲಿ ಹಲ್ಲುಗಳು ಇಲ್ಲದಿದ್ದಾಗ,ಅಥವಾ ಎಳೆ ಮಕ್ಕಳಲ್ಲಿ ಹಲ್ಲುಗಳು ಮೂಡುವಾಗ.
* ಅಲರ್ಜಿ ಸಮಸ್ಯೆ, ಹುಳಿ ತೇಗು,ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆಯ ಉರಿ, ಅತಿ ಆಮ್ಲೀಯತೆ ಸಮಸ್ಯೆ, ಟಾನ್ಸಿಲ್ ಹಾಗೂ ಗಂಟಲು ಸಮಸ್ಯೆ, ತೀವ್ರ ನೆಗಡಿ, ಸೈನಸ್ ಸೋಂಕು.. ಮುಂತಾದವುಗಳು.
* ಅತಿ ಆಮ್ಲೀಯ ಗುಣಲಕ್ಷಣದ ಆಹಾರ ಸೇವನೆ ಮಾಡಿದಾಗ.
ಪರಿಹಾರವೇನು :
* ಇದಕ್ಕೆ ಕಾರಣವನ್ನು ತಿಳಿದುಕೊಂಡು ಪರಿಹಾರ ಮಾಡಬೇಕಾಗುತ್ತದೆ.
* ಆ ಕಾರಣಕ್ಕೆ ವೈದ್ಯರ ಸಲಹೆ ಸೂಚನೆ ಪಡೆದು ಮುಂದುವರೆಯಬೇಕು.
* ವೈದ್ಯರ ಭೇಟಿಯಿಂದ ನಿಮ್ಮ ಸಮಸ್ಯೆಯ ಮೂಲವನ್ನು ತಿಳಿದುಕೊಳ್ಳಿ ಹಾಗೂ ಅದರಂತೆ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ.
* ದೊಡ್ಡವರಲ್ಲಿ ಬಾಯಿ, ತುಟಿ,ನಾಲಿಗೆ...ಇವುಗಳ ವ್ಯಾಯಾಮವನ್ನು ದಂತ ವೈದ್ಯರಿಂದ ತಿಳಿದುಕೊಂಡು ಪ್ರತಿದಿನ ಅಭ್ಯಾಸ ಮಾಡಿದರೆ ಸಮಸ್ಯೆ ಹಂತ ಹಂತವಾಗಿ ಬಗೆಹರಿಯುತ್ತದೆ.
* ಆಹಾರದ ಪದ್ಧತಿ ಬದಲಾವಣೆ ಮಾಡಿಕೊಳ್ಳಬೇಕು. ಅತಿ ಮಸಾಲೆ,ಅತಿ ಖಾರ ಅತಿ ಆಮ್ಲೀಯ ಗುಣಲಕ್ಷಣದ ಆಹಾರಗಳನ್ನು ಸೇವಿಸಬಾರದು.
* ಬಾಯಲ್ಲಿ ಹಲ್ಲುಗಳು ಇಲ್ಲದಿದ್ದರೆ ಅದರನ್ನು ಕಟ್ಟಿಸಿಕೊಂಡು ಮುಂದುವರೆಬೇಕು.
* ಸ್ಕೋಪಾಲಮಿನ್ ಪ್ಯಾಚ್ ಪರಿಣಾಮಕಾರಿಯಾಗಿರುತ್ತದೆ.
* ಬೆನ್ನಿನ ಮೇಲೆ ಮಲಗುವ ಅಭ್ಯಾಸ ಮಾಡಿ.
* ಸಾಧ್ಯವಾದಷ್ಟು ಮೂಗಿನಿಂದಲೇ ಉಸಿರಾಡಬೇಕು.
* ದೀರ್ಘಕಾಲಿನ ನೆಗಡಿ ಸೈನಸ್ ಪ್ರಾಬ್ಲಮ್ ಇಲ್ಲದಂತೆ ನೋಡಿಕೊಳ್ಳಬೇಕು.
* ಬಾಯಿಂದ ಉಸಿರಾಡುವ ಅಭ್ಯಾಸ ಎಂದಿಗೂ ಮಾಡಬಾರದು.
* ಗಂಟಲು ಸೋಂಕುಗಳು ಹೆಚ್ಚಾಗದಂತೆ ಎಚ್ಚರ ವಹಿಸಬೇಕು.
* ಎಳೆಯ ಮಕ್ಕಳಲ್ಲಿ ಹಾಲು ಹಲ್ಲುಗಳು ಮೂಡುವ ಸಮಯದಲ್ಲಿ ಈ ಸಮಸ್ಯೆ ಸರ್ವೇಸಾಮಾನ್ಯವಾಗಿದ್ದು,ಹಲ್ಲು ಬೆಳೆವಣಿಗೆ ಪೂರ್ತಿಯಾದ ಮೇಲೆ ಸರಿಯಾಗುತ್ತದೆ.