ಗೌರಿ ಲಂಕೇಶ್, ಕಲಬುರಗಿಯಂತೆ ಪ್ರಾಣ ಬಿಡಲು ರೆಡಿಯಾಗಿ : ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದಿದ್ದ ದಾವಣಗೆರೆ ವ್ಯಕ್ತಿ ಅರೆಸ್ಟ್
ಬೆಂಗಳೂರು: ಕನ್ನಡದ ಸಾಹಿತಿಗಳಾದ ಎಂ ಎಂ ಕಲಬುರಗಿ, ಗೌರಿ ಲಂಕೇಶ್ ಹತ್ಯೆ ಬಳಿಕ ಸಾಹಿತಿಗಳಿಗೆ ಬೆದರಿಕೆಗಳು ಹೆಚ್ಚಾಗಿವೆ. ಇದೀಗ ಕುಂ. ವೀರಭದ್ರಪ್ಪ, ಲಲಿತಾ ನಾಯಕ್, ಬಂಜಗೆರೆ ಜಯಪ್ರಕಾಶ್ ಗೆ ಬೆದರಿಕೆ ಪತ್ರಗಳು ಬಂದಿವೆ. ಗೌರಿ ಲಂಕೇಶ್, ಕಲಬುರಗಿಯಂತೆ ಪ್ರಾಣ ಬಿಡಲು ರೆಡಿಯಾಗಿ ಎಂದು ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಇದೀಗ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
ಸಾಹಿತಿಗಳಿಗೆ ನಿರಂತರವಾಗಿ ಪತ್ರ ಬರೆಯುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ದಾವಣಗೆರೆಯಲ್ಲಿ ಶಿವಾಜಿ ರಾವ್ ಜಾದವ್ ಎಂಬಾತನನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 15ಕ್ಕೂ ಹೆಚ್ಚು ಸಾಹಿತಿಗಳಿಗೆ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ. ಸಿಸಿಬಿ ಪೊಲೀಸರು ಬಂಧಿಸಿರುವ ಆರೋಪಿ, ಸಾಹಿತಿಗಳಿಗೆ ಅಂಚೆ ಮೂಲಕ ಬೆದರಿಕೆ ಪತ್ರಗಳನ್ನು ಕಳುಹಿಸಿದ್ದ. ಆ ಪತ್ರಗಳನ್ನೆಲ್ಲಾ ಸಿಸಿಬಿ ಎಫ್ಎಸ್ಎಲ್ ಗೆ ಕಳುಹಿಸಲಾಗಿತ್ತು. ಎಲ್ಲಾ ಪತ್ರದಲ್ಲೂ ಒಂದೇ ಕೈಬರಹ ಇರುವುದು ಗೊತ್ತಾಗಿದೆ. ಆದರೆ ಬೇರೆ ಬೇರೆ ಪೋಸ್ಟ್ ಆಫೀಸಲ್ಲಿ ಪತ್ರಗಳನ್ನು ರವಾನಿಸಿದ್ದಾನೆ.
ಬೆದರಿಕೆ ಪತ್ರಗಳ ಕೇಸನ್ನು ಸಿಸಿಬಿ ಪೊಲೀಸರಿಗೆ ವಹಿಸಲಾಗಿತ್ತು. ಕಳೆದ ಒಂದು ತಿಂಗಳಿನಿಂದ ಕಾರ್ಯಾಚರಣೆಗೆ ಇಳಿದಿರುವ ಸಿಸಿಬಿ ಪೊಲೀಸರು, ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ಕೂಡ ಮಾಡಿದ್ದಾರೆ. ಮೊದಲಿಗೆ ಪತ್ರಗಳು ಬಂದ ಪೋಸ್ಟ್ ಆಫೀಸ್ಗಳ ಪತ್ತೆ ಹಚ್ಚಲಾಗಿತ್ತು. ನಂತರ ಎಲ್ಲಾ ಪೋಸ್ಟ್ ಆಫೀಸ್ಗಳ ಕವರ್ ಡಂಪ್ ಮಾಡಿದ್ದರು. ಅಲ್ಲಿನ ಎಲ್ಲಾ ನಂಬರ್ಗಳ ಸಿಡಿಆರ್ ಪರಿಶೀಲನೆ ಮಾಡಲಾಗಿತ್ತು. ಎಲ್ಲಾ ಪೋಸ್ಟ್ ಆಫೀಸ್ಗಳ ಬಳಿ ಌಕ್ಟಿವ್ ಆಗಿದ್ದ ಒಂದು ನಂಬರ್ ಅನ್ನು ಪತ್ತೆ ಹಚ್ಚಲಾಗಿದೆ. ಆ ಒಂದು ನಂಬರ್ನ ಆಧಾರದಲ್ಲಿ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.