For the best experience, open
https://m.suddione.com
on your mobile browser.
Advertisement

ಕನ್ನಡ ಉಳಿಸುವ ಪ್ರಯತ್ನದಲ್ಲಿ ನಾವೇನು ಮಾಡುತ್ತಿದ್ದೇವೆ ?  ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್

09:44 AM Nov 01, 2024 IST | suddionenews
ಕನ್ನಡ ಉಳಿಸುವ ಪ್ರಯತ್ನದಲ್ಲಿ ನಾವೇನು ಮಾಡುತ್ತಿದ್ದೇವೆ    ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್
Advertisement

ಚಿತ್ರದುರ್ಗ, ನವೆಂಬರ್. 01 : ಕನ್ನಡವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ನಾವೇನು ಮಾಡುತ್ತಿದ್ದೇವೆ! ಏನು ಮಾಡಬೇಕು? ಎನ್ನುವ ಪ್ರಶ್ನೆಯನ್ನು ಅಭಿಮಾನವಿರುವ ಪ್ರತಿಯೊಬ್ಬ ಕನ್ನಡಿಗನೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

Advertisement

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಕರ್ನಾಟಕ ರಾಜೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, 'ಕನ್ನಡ ನಾಡು ಅನೇಕ ನಿರಾಶ್ರಿತರಿಗೆ ಆಶ್ರಯ ನೀಡಿದೆ. ಹಲವು ಧರ್ಮಗಳಿದ್ದರೂ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಇದು ಕನ್ನಡಿಗರ ಔದಾರವನ್ನು ಮಾನವೀಯತೆಯನ್ನು ಎತ್ತಿ ತೋರುತ್ತದೆ ಮತ್ತು ಕನ್ನಡ ಭಾಷೆ ಸಾಹಿತ್ಯವನ್ನು ಬೆಳೆಸುವ ಕೆಲಸ ಮಾಡಿದೆ' ಎಂದರು.
'ಸ್ವಾತಂತ್ರ್ಯ ಪೂರ್ವದಿಂದಲೇ ಭಾಷವಾರು ಪ್ರಾಂತ್ಯ ರಚನೆಗೆ ಆಗ್ರಹಿಸಿ ಹೋರಾಟ ನಡೆಯುತ್ತಲೇ ಇತ್ತು. ಹರಿದು ಹಂಚಿ ಹೋಗಿದ್ದ ಕನ್ನಡ ನಾಡಿನ ಭಾಗಗಳು ಪುನಃ ಒಂದು ಗೂಡಿ ಸಾಂಸ್ಕೃತಿಕ ಏಕತೆಯ ಜೊತೆಗೆ ರಾಜಕೀಯ ಏಕತೆಯನ್ನು ಸಾಧಿಸಬೇಕು ಎಂಬ ಹಂಬಲದಿಂದ ಕರ್ನಾಟಕ ಏಕೀಕರಣ ಚಳುವಳಿಯನ್ನು ಕನ್ನಡದ ಅಭಿಮಾನಿಗಳಾದ ಅನೇಕ ಮಹನೀಯರು ಹುಟ್ಟುಹಾಕಿದರು. ಬಳಿಕ ಏಕೀಕರಣ ಸಂಬಂಧ ಹಲವಾರು ಸಂಘ ಸಂಸ್ಥೆಗಳು, ವೇದಿಕೆಗಳಲ್ಲಿ ಚರ್ಚೆ, ಹೋರಾಟಗಳ ಫಲವಾಗಿ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ' ಎಂದು ತಿಳಿಸಿದರು.
'ನವೆಂಬರ್-1, ಅಂದರೆ ಇಂದು ಕನ್ನಡಿಗರಿಗೆ ಸಂಭ್ರಮದ ದಿನ, ಪ್ರತಿ ವರ್ಷ ಈ ದಿನ ಎಲ್ಲೆಡೆ ಕನ್ನಡದ ಬಾವುಟ ಹಾರಿಸಿ, ಕನ್ನಡಾಂಬೆಯ ಉತ್ಸವ ಮಾಡಿ, ಕನ್ನಡದ ಹಿರಿಮೆ ಗರಿಮೆಯನ್ನು ಹೇಳಿ ಭಾಷಣವನ್ನು ಮಾಡಿ ಸಂಭ್ರಮಿಸುತ್ತೇವೆ' ಎಂದರು.

'ಇನ್ನು ನಮ್ಮ ಕನ್ನಡ ಭಾಷೆ ಎಷ್ಟೊಂದು ಪ್ರಾಚೀನ? ಮಹಾಭಾರತದಲ್ಲಿ, ತಮಿಳು ಕಾವ್ಯದಲ್ಲಿ ಕನ್ನಡಿಗರ ಉಲ್ಲೇಖವಿದೆ. ಕ್ರಿಸ್ತ ಶಕ 450ರ ಕನ್ನಡದ ಮೊದಲ ಶಾಸನ - ಹಲ್ಮಡಿ ಶಾಸನದಿಂದ ನಮ್ಮ ಭಾಷೆ ಬರಹರೂಪಕ್ಕೆ ಬಂದು ಸಾಹಿತ್ಯರೂಪ ಪಡೆದು ಗ್ರಂಥಸ್ಥ ಸ್ವರೂಪಕ್ಕೆ ಬಂದಿತು ಎಂದರೆ ಆಶ್ಚರವಾಗುತ್ತದೆ. ಹಾಗಾಗಿ ನಮ್ಮ ಘನ ಸರ್ಕಾರ ಇತ್ತೀಚೆಗೆ ಜನರಲ್ಲಿ ಜಾಗೃತಿ ಮೂಡಿಸಲು ಹಲ್ಮಡಿ ಶಾಸನದ ಪ್ರತಿರೂಪವನ್ನು ಎಲ್ಲರೂ ನೋಡಲೆಂದು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಪ್ರತಿಷ್ಠಾಪಿಸುತ್ತಿದ್ದೇವೆ. ನಮ್ಮ ಸರ್ಕಾರ ಈ ಹೆಮ್ಮೆಯ ಕೆಲಸವನ್ನು ಮಾಡಿದೆ' ಎಂದು ತಿಳಿಸಿದರು.

Advertisement

'ನಮ್ಮ ಕನ್ನಡ ಭಾಷೆ, ಸಾಹಿತ್ಯ ಎಷ್ಟು ಪ್ರಾಚೀನವೋ ಅಷ್ಟೂ ಸುಸಂಸ್ಕೃತವಾದದ್ದು ಹಿರಿಮೆಯುಳ್ಳದ್ದು ಎಂಬುದಕ್ಕೆ ನಮ್ಮ ಸಾಹಿತ್ಯ ಕೃತಿಗಳು, ಕಾವ್ಯಗಳು, ಶಾಸನಗಳು, ಸಾಕ್ಷಿಯಾಗಿ ನಿಂತಿವೆ. ನಮ್ಮ ಹಲ್ಮಿಡಿ ಶಾಸನದ ಆನಂತರ ನಾನೂರು ವರ್ಷಗಳಲ್ಲಿ ಹಲವಾರು ಶಾಸನಗಳು,ವೀರಗಲ್ಲುಗಳು, ಮಾಸ್ತಿಕಲ್ಲುಗಳು, ರಾಜರ, ಸೇನಾಧಿಕಾರಿಗಳ, ಜನ ಸಾಮಾನ್ಯರ ಧೈರ್ಯ, ಧಾರ್ಮಿಕತೆ, ಮಾನವೀಯತೆ, ಶೌರ್ಯ, ಸಾಹಸ, ಸಮಾಜಕ್ಕಾಗಿ ಮಾಡಿದ ತ್ಯಾಗ, ನಾಡು-ನುಡಿಗಾಗಿ ಮಾಡಿದ ಸೇವೆ-ಇವೆಲ್ಲವನ್ನು ತೋರಿಸುತ್ತವೆ. ಹಾಗೆಯೇ ಜೈನಧರ್ಮದ ಶ್ರವಣಬೆಳೆಗೊಳದ ಶಾಸನವು ಮಾನವ ಜೀವನದ ನಶ್ವರತೆಯನ್ನು ತುಂಬಾ ಕಾವ್ಯಮಯವಾಗಿ ಹೇಳುತ್ತದೆ. ಇದು ಕನ್ನಡ ಭಾಷೆಯ ಸೌಂದರ್ಯ ವನ್ನೂ ಹೇಳುತ್ತದೆ' ಎಂದರು.

'ಇನ್ನು ಕನ್ನಡದ ಮೊದಲ ಲಕ್ಷಣದ ಕೃತಿ 9 ನೇ ಶತಮಾನದ ಮಧ್ಯದಲ್ಲಿಯ 'ಕವಿರಾಜ ಮಾರ್ಗ'ದಲ್ಲಿ ಬರುವ ಒಂದು ಮಾತು ಎಷ್ಟು ಸೊಗಸಾಗಿದೆ: ಒಂದು ನಾಡಿನ ನಿಜವಾದ ಸಂಪತ್ತು ಎಂದರೆ ಪರರ ಧರ್ಮವನ್ನು ಪರರ ವಿಚಾರವನ್ನು ಸಹನೆಯಿಂದ ಕಾಣುವುದು. ಇದು ಕನ್ನಡಿಗರ ಮನೋಭಾವವನ್ನು ಹೇಳುತ್ತದೆ' ಎಂದು ತಿಳಿಸಿದರು.

'ಮೊಟ್ಟ ಮೊದಲು ಕನ್ನಡ ಸಾಮ್ರಾಜ್ಯದ ಸ್ಥಾಪನೆಗೆ ಅಡಿಪಾಯ ಹಾಕಿದ ನೆಲ-ಈ ಚಿತ್ರದುರ್ಗ, ಕದಂಬರ ಮಯೂರ ವರ್ಮ ಬನವಾಸಿ ಪ್ರದೇಶದಿಂದ ಉನ್ನತ ವಿದ್ಯಾಭ್ಯಾಸಕ್ಕೆ ಕಂಚಿಗೆ ಹೋಗಿ ಅಲ್ಲಿ ತಮಿಳಪಲ್ಲವರಿಂದ ಅವಮಾನಿತನಾಗಿ,' ನಾನು ಒಂದು ಕನ್ನಡ ಸಾಮ್ರಾಜ್ಯವನ್ನು ಕನ್ನಡಿಗರಿಗಾಗಿ ಕಟ್ಟುತ್ತೇನೆ, ನಿಮ್ಮಂತೆ ಆಳುತ್ತೇನೆ. ಎಂದು ಪ್ರತಿಜ್ಞೆಯನ್ನು ಮಾಡಿ ಸಾಮ್ರಾಜ್ಯ ಕಟ್ಟಲು ಬಂದಿದ್ದು, ಚಿತ್ರದುರ್ಗದ ಚಂದ್ರವಳ್ಳಿಯಲ್ಲಿ ದಟ್ಟವಾದ ಅಡವಿ ಧವಳಪ್ಪ ಗುಡ್ಡದಲ್ಲಿ ಇಲ್ಲಿನ ಕನ್ನಡಿಗರ ಸಹಾಯದಿಂದ ಸೈನ್ಯಕಟ್ಟಿ ಸಾವಿರಾರು ಸೈನಿಕರನ್ನು ಗೆರಿಲ್ಲಾ ತಂತ್ರದಿಂದ ಕಟ್ಟಿಹಾಕಲಾಯಿತು. ಇದರಿಂದಾಗಿ ಕೊನೆಗೆ ಸ್ವತಃ ಪಲ್ಲವರೇ ಇಲ್ಲಿಂದ ಇಲ್ಲಿಯವರೆಗೆ ನಿನ್ನದೇ ರಾಜ್ಯ ಎಂದು ಕೈಯಾರೆ ಕಿರೀಟಧಾರಣೆ ಮಾಡಿದರು' ಎಂದು ಸ್ಮರಿಸಿದರು.

'ಅಲ್ಲಿಂದ ಉದಯವಾದ ಕನ್ನಡ ಸಾಮ್ರಾಜ್ಯಕ್ಕೆ ನಂತರ ಕದಂಬ ರಾಜರು ಕನ್ನಡ ಭಾಷೆ, ಸಂಸ್ಕೃತಿ, ಇತಿಹಾಸಕ್ಕೆ ಪ್ರೋತ್ಸಾಹ ನೀಡಿದರು. ಕನ್ನಡ ಲಿಪಿರೂಪ ಪಡೆದು ನಾಡಿನ ಅಭಿವೃದ್ಧಿಯಾಯಿತು. ಇದಕ್ಕೆ ಸಾಕ್ಷಿಯಾಗಿ ಚಂದ್ರವಳ್ಳಿಯ ದೇವಾಲಯದ ಮುಂದೆ ದೊಡ್ಡ ಬರಹದ ಶಾಸನವಿದೆ. ಹಾಗೆಯೇ ಶಾಸನ ಅತ್ಯಂತ ಪ್ರಾಚೀನಕಲೆಯೂ ಇಲ್ಲಿದೆ. ಇದುವರೆಗೆ ದೊರಕಿರುವ ಮೊದಲ ಕನ್ನಡ ಪದ್ಯ, ತಮಟಕಲ್ಲಿನ ಮೊದಲ ಶಾಸನದಲ್ಲಿದೆ. ಗುಣಮಧುರ ಎಂಬ ರಾಜನ ಗುಣಗಾನ ಮಾಡುವ ಈ ಪದ್ಯ ಕನ್ನಡದ ಭಾಷೆಯ ಶ್ರೇಷ್ಠತೆಯ ಉದಾಹರಣೆಯಾಗಿದೆ. ಹೀಗೆ ಚಿತ್ರದುರ್ಗ ಜಿಲ್ಲೆಯು ಕನ್ನಡಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ ಎಂಬುದು ಹಾಗೂ ಅದರ ವಾರಸುದಾರರು ನಾವು ಎಂಬುದು ನಮಗೆ ಅಭಿಮಾನ ಪಡುವಂಥದ್ದಾಗಿದೆ' ಎಂದರು.

Advertisement
Tags :
Advertisement