ರೈತರ ಜಮೀನು, ದೇವಸ್ಥಾನ ಆಯ್ತು.. ಈಗ ಚಿತ್ರದುರ್ಗದಲ್ಲಿ ರುದ್ರಭೂಮಿ ಜಾಗ ಖಬರಸ್ಥಾನ್ ತೆಕ್ಕೆಗೆ..!
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 07 : ರಾಜ್ಯದಲ್ಲಿ ವಕ್ಫ್ ಅಬ್ಬರ ನಿಲ್ಲುವಂತೆ ಕಾಣಿಸುತ್ತಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದ್ರೆ, ಒಂದೊಂದೆ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆ ನೋಡಿದರೆ ರಾಜ್ಯದ ಎಲ್ಲಾ ರೈತರು ತಮ್ಮ ಪಹಣಿಯನ್ನು ಪರಿಶೀಲಿಸಿಕೊಳ್ಳಬೇಕಾದ ಅವಶ್ಯಕತೆ ಎದ್ದು ಕಾಣಿಸುತ್ತಿದೆ. ಇದೀಗ ರುದ್ರಭೂಮಿಯ ಜಾಗವನ್ನು ಖಬರಸ್ಥಾನಕ್ಕೆ ಸೇರಿದ್ದು ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ರಾಜ್ಯದಲ್ಲಿ ಹಿಂದೂ ರೈತರ ಜಮೀನುಗಳು, ದೇವಸ್ಥಾನಗಳನ್ನು ವಕ್ಫ್ ಬೋರ್ಡ್ ಗೆ ಇದ್ದಕ್ಕಿದ್ದಂತೆ ಸೇರ್ಪಡೆ ಮಾಡಿರುವುದು ಜನತೆಯನ್ನು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಈಗ ರುದ್ರಭೂಮಿ ಜಾಗ ಖಬರಸ್ಥಾನಕ್ಕೆ ಸೇರ್ಪಡೆಯಾಗಿದೆ. ಅಂದಹಾಗೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ನಂದನ ಹೊಸೂರು ಗ್ರಾಮದ ಹಿಂದೂ ರುದ್ರಭೂಮಿ ಯನ್ನು ಇದೀಗ ಖಬರಸ್ಥಾನದ ಜಾಗಕ್ಕೆ ಸೇರಿಸಿದ್ದು, ಜಿಲ್ಲೆಯ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.ನದನಹೊಸೂರು ಗ್ರಾಮದಲ್ಲಿ ಗ್ರಾಮಸ್ಥರು ಆರೋಪಿಸಿದ್ದಾರೆ.
1965ರಲ್ಲಿ ಗ್ರಾಮದ ಜಮೀನನ್ನು ಸ್ಮಶಾನ ಜಾಗ ಎಂದು ಸೇರಿಸಲಾಗಿತ್ತು. ಇದಾದ ನಂತರ 2017-2018 ರಲ್ಲಿ ಮುಸ್ಲಿಂ ಖಬರಸ್ಥಾನಕ್ಕೆ ಸೇರಿಸಲಾಗಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ಅಲ್ಲಿನ ಗ್ರಾಮಸ್ಥರು ಹುಲ್ಲಿನ ಬಣವೆ ಹಾಕಿಕೊಂಡು ಕಣವನ್ನಾಗಿ ಮಾಡಿಕೊಂಡಿದ್ದರು. ಇದೀಗ ಹಿಂದೂಗಳು ಮತ್ತು ಮುಸ್ಲಿಂರ ನಡುವೆ ಜಾಗದ ವಿಚಾರದಲ್ಲಿ ವಾದ ವಿವಾದಗಳು ನಡೆಯುತ್ತಿವೆ.
ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಜಾಗದ ದಾಖಲೆಗಳನ್ನು ಪರಿಶೀಲಿಸಿ, ಏನಾಗಿದೆ ಎಂಬುದನ್ನು ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.