ಚಿತ್ರದುರ್ಗ | ಬಾಪೂಜಿ ಶಾಲೆಯಲ್ಲಿ ನೆರವೇರಿದ ಸಂಭ್ರಮದ ಕನ್ನಡ ರಾಜ್ಯೋತ್ಸವ
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 21 : ನಗರದ ಪಿಳೇಕೆರನಹಳ್ಳಿಯ ಬಾಪೂಜಿ ಶಾಲಾ ಆವರಣದಲ್ಲಿ ಬುಧವಾರ ಸಂಭ್ರಮದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ಕಲರವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನಿವೃತ ಮುಖ್ಯೋಪಾಧ್ಯಾಯ ಹುರುಳಿ ಬಸವರಾಜ ಮಾತನಾಡಿ, ಮಕ್ಕಳ ದಿನಾಚರಣೆಯ ಮಹತ್ವ ಹಾಗೂ ಕನ್ನಡನಾಡು ನುಡಿಯ ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಾಹಿತ್ಯ ಅತ್ಯಂತ ಉಪಯೋಗಕಾರಿಯಾಗಿದೆ ಎಂದು ತಿಳಿಸಿದರು. ಬಾಪೂಜಿ ಸಮೂಹ ಸಂಸ್ಥೆಗಳ ನಿರ್ದೇಶಕ ಕೆ.ಎಂ.ಚೇತನ್ ಮಾತನಾಡಿ, ಮಕ್ಕಳಿಗೆ ಸಮಯಪ್ರಜ್ಞೆ ಹಾಗೂ ಕಲಿಕೆಯಲ್ಲಿ ಸುದಾರಣೆ ಸಾಧಿಸುವ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಾಗಿರುವ ರಮ್ಯ ಜೆ ಮತ್ತು ಸರ್ಕಾರಿ ನೌಕರರಾದ ಸುಮನ್ ಸಿ ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮಕ್ಕಳು ಜಾಥಾ ನಡೆಸಿದರು. ಕನ್ನಡದ ಸಾಹಿತಿಗಳ ಭಾವಚಿತ್ರಗಳನ್ನು ಹಿಡಿದು ಜಾಥಾದಲ್ಲಿ ಸಾಗಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿವರ್ಗದವರು ಭಾಗವಹಿಸಿದರು.