ಕನ್ನಡ ನಾಮಫಲಕಗಳ ಬಳಕೆಗೆ ಸ್ವ ಇಚ್ಛೆಯಿಂದ ಮುಂದಾಗಿ : ಶಾಸಕ ವೀರೇಂದ್ರ ಪಪ್ಪಿ
ಸುದ್ದಿಒನ್, ಚಿತ್ರದುರ್ಗ,ಜುಲೈ. 10 : ಕನ್ನಡ ನಾಮಫಲಕಗಳ ಅಳವಡಿಕೆಯನ್ನು ಕನ್ನಡ ನೆಲದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರು ಸ್ವ ಇಚ್ಛೆಯಿಂದ ಖಡ್ಡಾಯಗೊಳಿಸಿಕೊಂಡು ಪಾಲನೆ ಮಾಡಬೇಕೆಂದು ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ ಕರೆ ನೀಡಿದರು.
ನಗರದ ಒನಕೆಓಬವ್ವ ವೃತ್ತದಲ್ಲಿ ಕರ್ನಾಟಕ ಜ್ಯೋತಿ ರಥಯಾತ್ರೆಯ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ನಾಮಫಲಕಗಳ ಅಳವಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದೇಶ ಹೊರಡಿಸಿದ್ದಾರೆ. ಪ್ರತಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆಗೆ ಸರ್ಕಾರ ಆದೇಶಿಸಿದೆ. ಜೊತೆಯಲ್ಲಿ ಕನ್ನಡ ನಾಡಿನಲ್ಲಿ ಇರುವಂತಹ ಎಲ್ಲಾ ವರ್ಗದ ಜನತೆ ನಾಮಫಲಕಗಳಲ್ಲಿ ಕನ್ನಡ ಬಳಕೆಯನ್ನು ಸ್ವ ಇಚ್ಛೆಯಿಂದ ಜಾರಿಗೊಳಿಸಬೇಕೆಂದು ಮನವಿ ಮಾಡಿದರು.
ಕನ್ನಡದ ಬಗ್ಗೆ ಹೋರಾಟಗಾರರಿಗೂ ತಮಗೂ, ಅಧಿಕಾರಿಗಳಿಗೂ, ಜಿಲ್ಲಾಡಳಿತಕ್ಕೂ ಅಪಾರವಾದ ಜವಾಬ್ದಾರಿ ಇದೆ. ಕನ್ನಡ ಭಾಷೆ ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಹೇಳಿದರು.
ಕರ್ನಾಟಕ ಜ್ಯೋತಿ ರಥಯಾತ್ರೆಯ ಕಾರ್ಯಕ್ರಮವನ್ನು ನಗರದಲ್ಲಿ ಅಧಿಕಾರಿಗಳು ಅಚ್ಚುಕಟ್ಟಾಗಿ ಸಜ್ಜುಗೊಳಿಸಿದ್ದಾರೆಂದು ಇದೇ ಸಂದರ್ಭದಲ್ಲಿ ಶಾಸಕರು ಪ್ರಶಂಸೆ ವ್ಯಕ್ತಿಪಡಿಸಿದರು.
ಕನ್ನಡ ಪರ ಹೋರಾಟಗಾರ ಶಿವಕುಮಾರ್ ಮಾತನಾಡಿ. ಕನ್ನಡ ನಾಮಫಲಕಗಳ ಅಳವಡಿಕೆಗೆ ಆಗ್ರಹಿಸಿ ಮಾಡಲಾದ ಹೋರಾಟದ ಸಂದರ್ಭದಲ್ಲಿ ನಮ್ಮ ಮೇಲೂ, ಕನ್ನಡ ಪರ ಹೋರಾಟಗಾರರ ಮೇಲೂ ಪೊಲೀಸ್ ಪ್ರಕರಣಗಳು ದಾಖಲಾಗಿವೆ. ಇದ್ಯಾವುದಕ್ಕೂ ಜಗ್ಗದೇ ಕನ್ನಡ ಪರವಾದ ಹೋರಾಟವನ್ನು ನಿಲ್ಲಿಸುವುದಿಲ್ಲವೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ್, ಕರುನಾಡು ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಸೇರಿದಂತೆ ಹಲವಾರು ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು.