ಮುರುಘಾ ಮಠಕ್ಕೆ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ....!
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 27 : ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಮಠದ ಆಡಳಿತದಲ್ಲಿ ಶ್ರೀಗಳ ಹಸ್ತಕ್ಷೇಪ ಮಾಡಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಇದೀಗ ತಡೆಯೊಡ್ಡಿದೆ. ಮುರುಘಾ ಮಠ ಹಾಗೂ ಎಸ್. ಜೆ. ಎಂ. ವಿದ್ಯಾಪೀಠ ಆಡಳಿತಕ್ಕೆ ಬ್ರೇಕ್ ಹಾಕಿದೆ. ಸಮಿತಿಯನ್ನು ರಚನೆ ಮಾಡಲು ಸುಪ್ರೀಂ ಕೋರ್ಟ್ ಮೂರು ದಿನಗಳ ಕಾಲಾವಕಾಶವನ್ನು ನೀಡಿದೆ.
ಇನ್ನು ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟೀಸ್ ನೀಡಿದೆ. ಮೂರು ದಿನಗಳ ಒಳಗಾಗಿ ಹೈಕೋರ್ಟ್ ಆದೇಶದಂತೆ ಸಮಿತಿ ರಚಿಸುವಂತೆ ಮಠದ ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಜೊತೆಗೆ ಈ ಸಂಬಂಧ ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆಯೂ ಸೂಚನೆ ನೀಡಲಾಗಿದೆ.
ಮಠದ ಆಡಳಿತವನ್ನು ಇನ್ನು ಮುಂದೆ ಸರ್ಕಾರವೇ ನೋಡಿಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ. ಮೇಲ್ವಿಚಾರಣಾ ಸಮಿತಿಯಲ್ಲಿ ಆರೋಪಿಗಳು ಇರದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದೆ. ನ್ಯಾ.ವಿಕ್ರಮನಾಥ ನೇತೃತ್ವದಲ್ಲಿನ ಪೀಠ ಈ ಸಂಬಂಧ ಆದೇಶ ಹೊರಡಿಸಿದೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಮುರುಘಾಶ್ರೀ ಆಡಳಿತ ನಡೆಸುತ್ತಿರುವುದನ್ನು ಪ್ರಶ್ನಿಸಿ ಮಾಜಿ ಸಚಿವ ಹೆಚ್. ಏಕಾಂತಯ್ಯ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿದ್ದರು. ಇದೀಗ ಆ ಅರ್ಜಿ ವಿಚಾರಣೆ ನಡೆದಿದ್ದು, ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ.