ಬಯಲು ಮಲವಿಸರ್ಜನೆ ನಿಲ್ಲಿಸಿ, ಜಂತುಹುಳು ಬಾಧೆಯಿಂದ ನಿವಾರಣೆ ಪಡೆಯಿರಿ : ಡಾ.ಬಿ.ವಿ.ಗಿರೀಶ್ ಸಲಹೆ
ಚಿತ್ರದುರ್ಗ. ಡಿ.09: ಕರುಳಿನ ಹುಳುಗಳು ನಮ್ಮೊಳಗೆ ವಾಸಿಸುವ ಮೂಕ ಅಕ್ರಮಣಕಾರರು. ಬಯಲು ಮಲವಿಸರ್ಜನೆ ನಿಲ್ಲಿಸಿ, ಜಂತುಹುಳು ಬಾಧೆಯಿಂದ ನಿವಾರಣೆ ಪಡೆಯಿರಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ನಗರದ ಐಯುಡಿಪಿ ಬಡಾವಣೆಯ 11ನೇ ಕ್ರಾಸ್‍ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮದಕರಿಪುರ ಭಾರತಿ ಪ್ರೌಢಶಾಲೆಯಲ್ಲಿ ಸೋಮವಾರ ರಾಷ್ಟ್ರೀಯ ಜಂತುಹುಳು ದಿನದ ಅಂಗವಾಗಿ ಜಂತು ನಿವಾರಕ ಮಾತ್ರೆ ನುಂಗಿಸುವ ಮೂಲಕ ಮತ್ತು ಶೌಚಾಲಯ ಬಳಕೆಯ ಮಹತ್ವ ಕುರಿತು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು 2015ರಲ್ಲಿ ಪ್ರಾರಂಭಿಸಲಾಯಿತು. ಪ್ರತಿ ವರ್ಷ ಎರಡು ಎನ್‍ಡಿಡಿ ಸುತ್ತುಗಳ ಮೂಲಕ ಕೋಟಿಗಟ್ಟಲೆ ಮಕ್ಕಳು ಮತ್ತು ಹದಿಹರೆಯದವರನ್ನು ತಲುಪುವ ಮೂಲಕ ಒಂದೇ ದಿನದಲ್ಲಿ ಜಾರಿಗೊಳಿಸಲಾದ ಅತಿದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ದೇಶದ ಪ್ರತಿಯೊಂದು ಮಗುವನ್ನು ಹುಳು ಮುಕ್ತರನ್ನಾಗಿಸುತ್ತದೆ. “ಅವರ ಒಟ್ಟಾರೆ ಆರೋಗ್ಯ, ಪೌಷ್ಠಿಕಾಂಶದ ಸ್ಥಿತಿ, ಶಿಕ್ಷಣದ ಪ್ರವೇಶ ಮತ್ತು ಜೀವನದ ಗುಣಮಟ್ಟ ಸುಧಾರಿಸಲು” ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳ ವೇದಿಕೆಗಳ ಮೂಲಕ ಜಂತುಹುಳು ನಿವಾರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕಾವ್ಯ ಮಾತನಾಡಿ, ವೈಯಕ್ತಿಕ ನೈರ್ಮಲ್ಯದ ಕೊರತೆ, ಬೇಯಿಸದ ಮತ್ತು ಕಲುಷಿತ ಆಹಾರ ಮತ್ತು ಅತಿಯಾದ ಸಿಹಿ ತಿಂಡಿಗಳು ಮತ್ತು ಜಂಕ್ ಫುಡ್ ಸೇವನೆ ಸೇರಿದಂತೆ ಮಕ್ಕಳಲ್ಲಿ ವಿವಿಧ ಅಂಶಗಳಿಂದ ಜಂತುಹುಳು ಬಾಧೆ ಉಂಟಾಗಬಹುದು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜನಾಥ ಮಾತನಾಡಿ, ನೈರ್ಮಲ್ಯ ಶೌಚಾಲಯಗಳನ್ನು ಬಳಸಿ. ಹೊರಗೆ ಮಲವಿಸರ್ಜನೆ ಮಾಡಬೇಡಿ. ಮುಖ್ಯವಾಗಿ ತಿನ್ನುವ ಮೊದಲು ಮತ್ತು ಶೌಚಾಲಯಗಳನ್ನು ಬಳಸಿದ ನಂತರ ಕೈಗಳನ್ನು ಸರಿಯಾಗಿ ತೊಳೆಯಿರಿ. ಚಪ್ಪಲಿ ಮತ್ತು ಬೂಟುಗಳನ್ನು ಧರಿಸಿ. ಸುರಕ್ಷಿತ ಮತ್ತು ಶುದ್ಧ ನೀರಿನಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸರಿಯಾಗಿ ತೊಳೆಯಿರಿ. ಸರಿಯಾಗಿ ಬೇಯಿಸಿದ ಆಹಾರ ಸೇವಿಸಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ 19 ವರ್ಷದ ಒಳಗಿನ 325 ಮಕ್ಕಳಿಗೆ ಸಾಂಕೇತಿಕವಾಗಿ ಜಂತುಹುಳ ನಿವಾರಕ ಮಾತ್ರೆ ನುಂಗಿಸಲಾಯಿತು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ. ಸುರೇಂದ್ರ, ಡಾ. ಕಾವ್ಯ, ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಕಾತ್ಯಾಯನಮ್ಮ, ಉಷಾ, ಪವಿತ್ರ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀನಿವಾಸ್, ಪ್ರವೀಣ್ ಕುಮಾರ್, ಶಾಲಾ ಶಿಕ್ಷಕರಾದ ಉಮೇಶ್, ದ್ಯಾಮಣ್ಣ, ಆಶಾ ಕಾರ್ಯಕರ್ತೆಯರು, ಮಕ್ಕಳು, ಪೋಷಕರು ಇದ್ದರು.