ಚಿತ್ರದುರ್ಗ | ಅಕ್ಷರ ಕಲಿಸಿದ ಶಾಲೆಗೆ ಮೂಲಂಗಿ ರಂಗಪ್ಪರೆಡ್ಡಿ ಕುಟುಂಬದಿಂದ ಕೊಡುಗೆ
ಸುದ್ದಿಒನ್, ಚಿತ್ರದುರ್ಗ: ಅಕ್ಷರ ಕಲಿಸಿದ ಹಾಗೂ ಹುಟ್ಟೂರಿನ ಶಾಲೆಯ ಪ್ರಗತಿಗೆ ನನ್ನ ಶಾಲೆ ನನ್ನ ಕೊಡುಗೆ ಆಂದೋಲನ ಹಮ್ಮಿಕೊಂಡಿದ್ದು, ಮೂಲಂಗಿ ಶಾರದಮ್ಮ ರಂಗಪ್ಪ ರೆಡ್ಡಿ ಅವರ ಕುಟುಂಬ ಈ ಅಭಿಯಾನಕ್ಕೆ ಕೈಜೋಡಿಸಿದೆ.
ದೊಡ್ಡಸಿದ್ದವ್ವನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಯುಪಿಎಸ್ ಕೊಡುಗೆ ನೀಡುವ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾಋ ಹಮ್ಮಿಕೊಳ್ಳಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಮಾತನಾಡಿ, ಅಕ್ಷರ ಕಲಿಸಿದ ಅಥವಾ ಹುಟ್ಟೂರಿನ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೇವಲ ಸರ್ಕಾರದ ಕೆಲಸವಲ್ಲ, ನಮ್ಮ ಹೊಣೆಗಾರಿಕೆ ಎಂಬ ಗ್ರಾಮಸ್ಥರ ನಡೆ ಮಾದರಿ ಆಗಿದೆ. ಅದರಲ್ಲೂ ಮೂಲಂಗಿ ಶಾರದಮ್ಮ ರಂಗಪ್ಪ ರೆಡ್ಡಿ ಕುಟುಂಬ ಶಾಲೆಗೆ ಯುಪಿಎಸ್ ಕೊಡುಗೆ ನೀಡುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಪ್ರಗತಿಗೆ ದಾನ ಮಾಡುವವರ ಸಂಖ್ಯೆ ಹೆಚ್ಚಾಗಬೇಕು. ಆಗ ಮಾತ್ರ ಬಡ, ಹಳ್ಳಿ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಬಳ್ಳಾರಿ ಕೆಪಿಸಿಎಲ್ ಸಹಾಯಕ ಇಂಜಿನಿಯರ್ ಆದರ್ಶ, ಆರ್.ಶ್ರೀನಿವಾಸ ರೆಡ್ಡಿ ಅವರ ಕೊಡುಗೆ ಮಾದರಿ ಆಗಿದೆ ಎಂದು ತಿಳಿಸಿದ ಅವರು, ಮಕ್ಕಳಿಗೆ ಶಾಲಾ ಪರೀಕ್ಷೆ ಮತ್ತು ಓದಿನ ಕುರಿತು ಹೆಚ್ಚು ಮಾಹಿತಿ ಒದಗಿಸಬೇಕು. ಹಳ್ಳಿ ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಕೆಲಸ ಶಿಕ್ಷಕರು ಮಾಡಬೇಕೆಂದರು.
ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ, ಖ್ಯಾತ ಭೂಗರ್ಭ ಶಾಸ್ತ್ರಜ್ಞ ಎನ್.ಜೆ.ದೇವರಾಜರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಶಿಕ್ಷಕ ಎಚ್.ವಿ.ಮಹಾಂತೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯೆ ಆರತಿ ಮಹಡಿ ಶಿವಮೂರ್ತಿ, ಪ್ರಾಚಾರ್ಯ ಎನ್.ಮಂಜುನಾಥರೆಡ್ಡಿ, ಸಿ.ಎಲ್.ಶಿವಮೂರ್ತಿ, ಕೆ.ಸಿ.ರಾಮು, ಡಾ.ಚೇತನ್ ರಾಮ್, ಕೃಷ್ಣಮೂರ್ತಿ ಇತರರಿದ್ದರು. ಡಾ.ಶಮೀಲಾ ಮತ್ತು ಡಾ.ಚೇತನ್ ರಾಮ್ ತಂಡದಿಂದ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಪರಿಜಾತಮ್ಮ ಪ್ರಾರ್ಥಿಸಿದರು. ಆರ್.ಎನ್.ಗಾಯತ್ರಿ ಸ್ವಾಗತಿಸಿದರು. ಎಂ.ಆದರ್ಶ ಪ್ರಾಸ್ತಾವಿಕವಾಗಿ ಮಾತನಾಡಿದರು.