ಸಮಾಜಶಾಸ್ತ್ರಜ್ಞರಿಂದ ದೇಶದ ಬದಲಾವಣೆ ತರಲು ಸಾಧ್ಯ : ಕೆ.ಎಸ್.ನವೀನ್
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 15 : ಭಾರತದ ಭವಿಷ್ಯಕ್ಕೆ ಸಮಾಜಶಾಸ್ತ್ರಜ್ಞರ ಅವಶ್ಯಕತೆಯಿದೆ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.
ಕರ್ನಾಟಕ ಶೋಷಿಯಾಲಜಿ ಅಸೋಸಿಯೇಷನ್, ಸರ್ಕಾರಿ ಕಲಾ ಕಾಲೇಜು(ಅಟಾನಮಸ್) ಚಿತ್ರದುರ್ಗ, ಚಳ್ಳಕೆರೆ ಹೆಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ವಿಶ್ವವಿದ್ಯಾನಿಲಯ ಸಮಾಜಶಾಸ್ತ್ರ ಶಿಕ್ಷಕರ ಅಸೋಸಿಯೇಷನ್, ಕಾಲೇಜು ಪ್ರಾಧ್ಯಾಪಕರ ಅಸೋಸಿಯೇಷನ್ ಸಹಯೋಗದೊಂದಿಗೆ ಸರ್ಕಾರಿ ಕಲಾ ಕಾಲೇಜು (ಅಟಾನಮಸ್) ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಹಾಲ್‍ನಲ್ಲಿ ಶುಕ್ರವಾರ ನಡೆದ ಹದಿನಾರನೆ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನ ಉದ್ಗಾಟಿಸಿ ಮಾತನಾಡಿದರು.
ಸಮಾಜಶಾಸ್ತ್ರಜ್ಞರು ಗಂಭೀರವಾಗಿ ಚಿಂತಿಸಿದರೆ ದೇಶದ ಭವಿಷ್ಯವನ್ನು ಪರಿವರ್ತಿಸಬಹುದು. ಇಂಜಿನಿಯರ್, ಡಾಕ್ಟರ್‍ಗಳು ಕೇವಲ ನಾಲ್ಕು ಗೋಡೆಯಲ್ಲಿ ಲ್ಯಾಬ್‍ಗಳಲ್ಲಿ ಕೆಲಸ ಮಾಡುತ್ತಾರೆಯೇ ವಿನಹಃ ದೇಶದ ಭವಿಷ್ಯ ಬದಲಾಯಿಸುವುದಿಲ್ಲ. ಅದೇ ಸಮಾಜಶಾಸ್ತ್ರಜ್ಞರಿಂದ ದೇಶದಲ್ಲಿ ಏನು ಬೇಕಾದರೂ ಬದಲಾವಣೆ ತರಲು ಸಾಧ್ಯ. ವಿದ್ಯಾರ್ಥಿಗಳಿಗೆ ಸಮಾಜಶಾಸ್ತ್ರದ ಬಗ್ಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಉಪನ್ಯಾಸಕರು, ಅಧ್ಯಾಪಕರುಗಳ ಮೇಲಿದೆ ಎಂದು ತಿಳಿಸಿದರು.
ದಿನ ಬೆಳಗಾದರೆ ಮಾಧ್ಯಮಗಳಲ್ಲಿ ಭ್ರಷ್ಟಾಚಾರ, ಅಪರಾಧಗಳನ್ನೇ ನೋಡುತ್ತಿದ್ದೇವೆ. ಇಂದಿನ ಪೀಳಿಗೆಯ ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ, ಗುರು-ಹಿರಿಯರನ್ನು ಗೌರವಿಸುವುದು ಹಾಗೂ ಸಮಾಜದಲ್ಲಿ ಯಾವ ರೀತಿ ಬದುಕಬೇಕೆನ್ನುವ ಜ್ಞಾನ ಬೇಕಾಗಿರುವುದರಿಂದ ಸಮಾಜಶಾಸ್ತ್ರಕ್ಕೆ ತನ್ನದೆ ಆದ ಮಹತ್ವವಿದೆ ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ.ಬಿ.ಡಿ.ಕುಂಬಾರ್ ಮಾತನಾಡುತ್ತ ಸಮಾಜದಲ್ಲಿನ ಪ್ರತಿಯೊಂದು ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಸಮಾಜಶಾಸ್ತ್ರ ವಿಷಯವನ್ನು ಇಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣದಲ್ಲಿಯೂ ಕಲಿಸುವ ಅಗತ್ಯತೆಯಿದೆ. ಸಮಾಜಶಾಸ್ತ್ರಜ್ಞರನ್ನು ಸಮಾಜದ ಉದ್ದಾರಕರೆಂದು ಕರೆಯಬೇಕಾಗಿದೆ. ಸಮಾಜದಲ್ಲಿನ ಸಾಮಾಜಿಕ ಸಮಸ್ಯೆಗಳ ಕುರಿತು ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗ ಜಾಗೃತಿ ಮೂಡಿಸುವ ಹೊಣೆಗಾರಿಕೆ ಪ್ರಾಧ್ಯಾಪಕರು ಹಾಗೂ ಉಪನ್ಯಾಸಕರುಗಳ ಮೇಲಿದೆ ಎಂದು ಹೇಳಿದರು.
ಶಿಕ್ಷಣದಲ್ಲಿರುವ ಪಠ್ಯಗಳನ್ನು ಹೊರತುಪಡಿಸಿ ಮಕ್ಕಳಿಗೆ ಸಾಮಾಜಿಕವಾಗಿ ಜೀವಂತವಾಗಿರುವ ಸಮಸ್ಯೆಗಳ ಕುರಿತು ಬೋಧಿಸಬೇಕು. ಸಮಾಜಶಾಸ್ತ್ರದ ವಿಜ್ಞಾನಿಗಳು ಭ್ರಷ್ಠಾಚಾರಗಳನ್ನು ಹೋಗಲಾಡಿಸಲು ಏನು ಮಾಡುತ್ತಿದ್ದಾರೆನ್ನುವುದು ನಮ್ಮ ಮುಂದಿರುವ ಪ್ರಶ್ನೆ? ಸಾಮಾಜಿಕ ಸಮಸ್ಯೆ, ನಿರುದ್ಯೋಗ ತಾಂಡವವಾಡುತ್ತಿದೆ. ಭಾರತದಲ್ಲಿರುವ 140 ಜನರಿಗೂ ಸರ್ಕಾದ ಉದ್ಯೋಗ ಕೊಡಲು ಸಾಧ್ಯವಿಲ್ಲ. ಹೇಗೆ ಸ್ವಯಂ ಉದ್ಯೊಗ ಸೃಷ್ಟಿಸಿಕೊಂಡು ಸ್ವಾವಲಂಭಿಯಾಗಿ ಬದುಕಬೇಕೆನ್ನುವುದನ್ನು ಕಲಿಸುವುದೇ ಸಮಾಜ ಶಾಸ್ತ್ರದ ಗುರಿಯಾಗಬೇಕೆಂದರು.
ಸ್ನಾತಕ, ಸ್ನಾತಕೋತ್ತರ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನೆ ಇಳಿಮುಖವಾಗುತ್ತಿದೆ. ಕೋಮುವಾದ ಜಾಸ್ತಿಯಾಗುತ್ತಿದೆ. ಜಾತಿಯತೆ, ಮೌಢ್ಯ, ಅಸ್ಪøಶ್ಯತೆ ನಿವಾರಿಸಬೇಕಾಗಿರುವುದು ನಮ್ಮ ಮುಂದಿರುವ ಸವಾಲು. ಈ ಸಂಬಂಧ ಸಮ್ಮೇಳನದಲ್ಲಿ ರೆಸಲೂಷನ್ ಮಾಡಿ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಮಂತ್ರಿಗಳಿಗೆ ಕಳಿಸುವಂತೆ ಪ್ರೊ.ಬಿ.ಡಿ.ಕುಂಬಾರ್ ಸಲಹೆ ನೀಡಿದರು.
ಸಾವಿತ್ರಿಬಾಯಿಪುಲೆ ಪುಣೆ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಶೃತಿ ತಂಬೆ ಮಾತನಾಡಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಜಾ ಪ್ರಭುತ್ವದಲ್ಲಿ ಎಲ್ಲರಿಗೂ ಸಮಾನತೆ ನೀಡಿರುವುದರಿಂದ ಪ್ರತಿಯೊಬ್ಬರಿಗೂ ಓಟಿನ ಹಕ್ಕು ಸಿಕ್ಕಿದೆ. ಸಮಾಜಶಾಸ್ತ್ರ ಸಮಾಜದ ಸತ್ಯ ಹಾಗೂ ಅಡಿಪಾಯವಿದ್ದಂತೆ. ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಮಕ್ಕಳಿಗೆ ಶಿಕ್ಷಣ ಹೇಳಿಕೊಡಲು ಹೋಗುವಾಗ ಅನೇಕರು ಅವರ ಮೇಲೆ ಮೊಟ್ಟೆ, ಕಲ್ಲು, ಸಗಣಿಯನ್ನು ಎಸೆಯುತ್ತಾರೆ. ಇಷ್ಟೆಲ್ಲಾ ಅವಮಾನ ಅನುಭವಿಸಿ ಮಕ್ಕಳಿಗೆ ಪಾಠ ಹೇಳಿಕೊಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಇಂತಹ ಅನೇಕ ಸಾಮಾಜಿಕ ಸಮಸ್ಯೆಗಳು ಇನ್ನು ಜೀವಂತವಾಗಿವೆ. ಇದಕ್ಕೆಲ್ಲಾ ಸಮಾಜಶಾಸ್ತ್ರದಿಂದ ಪರಿಹಾರ ಕಂಡುಕೊಳ್ಳಬಹುದಾ ಎನ್ನುವ ಕುರಿತು ಚಿಂತಿಸಬೇಕಿದೆ ಎಂದರು.
ಸರ್ಕಾರಿ ಕಲಾ ಕಾಲೇಜು ಅಟಾನಮಸ್ ಪ್ರಾಚಾರ್ಯರಾದ ಬಿ.ಟಿ.ತಿಪ್ಪೇರುದ್ರಸ್ವಾಮಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಚಳ್ಳಕೆರೆ ಹೆಚ್.ಪಿ.ಪಿ.ಸಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಮಂಜುನಾಥ ಬಿ.ಎಸ್. ಕರ್ನಾಟಕ ಸೋಶಿಯಾಲಜಿ ಅಸೋಸಿಯೇಷನ್ ಅಧ್ಯಕ್ಷೆ ಪ್ರೊ.ಜಯಶ್ರಿ ಎಸ್. ಕಾರ್ಯದರ್ಶಿ ಡಾ.ಆದಿನಾರಾಯಣಪ್ಪ, ಸಂಘಟನಾ ಕಾರ್ಯದರ್ಶಿ ಡಾ.ಎಸ್.ಆರ್.ಲೇಪಾಕ್ಷ, ಸಹ ಸಂಘಟನಾ ಕಾರ್ಯದರ್ಶಿ ಡಾ.ಶ್ಯಾಮರಾಜ್ ಟಿ., ಐ.ಕ್ಯೂ.ಎ.ಸಿ. ಕೋ-ಆರ್ಡಿನೇಟರ್ ಪ್ರೊ.ತಾರಿಣಿ ಶುಭದಾಯಿನಿ ವೇದಿಕೆಯಲ್ಲಿದ್ದರು.
ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಕಾಲೇಜುಗಳ ಅಧ್ಯಾಪಕರುಗಳು, ವಿಶ್ವವಿದ್ಯಾನಿಲಯ ಹಾಗೂ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕರುಗಳು ಹಾಗೂ ಸಂಶೋಧನಾ, ಸ್ನಾತಕೋತ್ತರ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.