ಗ್ರಾಂ.ಪಂ. ಅನುದಾನದಲ್ಲಿ ಅಕ್ರಮ : ತನಿಖೆಗೆ ಕೆಟಿ. ತಿಪ್ಪೇಸ್ವಾಮಿ ಒತ್ತಾಯ
ಸುದ್ದಿಒನ್, ಹಿರಿಯೂರು, ನವೆಂಬರ್. 15 : ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮ ಪಂಚಾಯಿತಿಗಳಿಗೆ ಕೋಟಿ ಕೋಟಿ ಅನುದಾನ ಬಂದಿದ್ದು, ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಸದೆ ಬೋಗಸ್ ದಾಖಲೆ ಸೃಷ್ಟಿಸಿ ಹಣ ಡ್ರಾ ಮಾಡಲಾಗುತ್ತದೆ. ಇದಕ್ಕೆ ಉದಾಹರಣೆಯಂತೆ ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಹಗರಣದಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತನಿಖೆ ನಡೆಸಿದರೆ ಎಲ್ಲಾ ಅಧಿಕಾರಿಗಳು ಬಯಲಿಗೆ ಬರುತ್ತಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಕೆಟಿ. ತಿಪ್ಪೇಸ್ವಾಮಿ ಆರೋಪಿಸಿದರು.
ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಭ್ರಷ್ಟಾಚಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಶುಕ್ರವಾರಕ್ಕೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಭಾಗವಹಿಸಿ ಮಾತನಾಡಿದರು.
ಪಂಚಾಯತಿಗಳ ವ್ಯಾಪ್ತಿಯಲ್ಲಿ ವಾಣಿಜ್ಯ ಕಂಪನಿಗಳು ಕೈಗಾರಿಕೆಗಳು ಪಂಚಾಯಿತಿಯ ನಿಯಮಗಳ ಪ್ರಕಾರ ಕಂದಾಯ ಕಟ್ಟದೆ ಖಾತೆ ತೆರೆಯದೆ ಅಕ್ರಮವಾಗಿ ನಡೆಯುತ್ತಿರುವ ಮತ್ತು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೋಟ್ಯಾನು ಗಟ್ಟಲೆ ಕಾಮಗಾರಿ ನಡೆಸದೆ ಹಣ ಪಡೆದಿರುತ್ತಾರೆ. ಈ ಸ್ವತ್ತು ಮತ್ತು ಖಾತೆ ಮಾಡುವುದಕ್ಕೆ ಇಂತಿಷ್ಟು ಲಂಚ ಕೊಡಬೇಕು ಅನೇಕ ಗ್ರಾಮಗಳಲ್ಲಿ ಮರ್ಕ್ಯೂರಿ ದೀಪಗಳು ಉರಿಯುತ್ತಿಲ್ಲ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಸ್ಥಗಿತಗೊಂಡಿವೆ. ಗ್ರಾಮಗಳಲ್ಲಿ ಸೊಳ್ಳೆಗಳು ಹೆಚ್ಚಾಗಿ ಅನೇಕ ತರಹದ ರೋಗಗಳು ಪೀಡಿಸುತ್ತವೆ. ಈ ಸಂಬಂಧ ಅನೇಕ ಬಾರಿ ಗ್ರಾಮ ಪಂಚಾಯಿತಿ ಪಿಡಿಓಗಳಿಗೆ ಸೇರಿದಂತೆ ರಾಜ್ಯಮಟ್ಟದ ಎಲ್ಲಾ ಅಧಿಕಾರಿಗಳಿಗೂ ಪುತ್ರ ಬರೆದರು ಯಾವುದೇ ಕ್ರಮ ವಹಿಸಿರುವುದಿಲ್ಲ ಆದ್ದರಿಂದ ಸಂಬಂಧಪಟ್ಟ ಗ್ರಾಮೀಣ ಅಭಿವೃದ್ಧಿ ಸಚಿವರು ಧರಣಿ ಸಳಕ್ಕೆ ಬಂದು ನಿಯಮಾನುಷಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ತಿಪ್ಪೇಸ್ವಾಮಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಆಲೂರು ಸಿದ್ದರಾಮಣ್ಣ, ಶಿವಣ್ಣ, ಬಿ ಆರ್. ರಂಗಸ್ವಾಮಿ, ತಿಮ್ಮಾರೆಡ್ಡಿ, ಹಳ್ಳಿಕೆರೆ ತಿಪ್ಪೇಸ್ವಾಮಿ, ನಾಗರಾಜ್, ಕರಿಯಪ್ಪ, ಈರಣ್ಣ, ಎಸ್ ಆರ್. ರಂಗಸ್ವಾಮಿ ಗೋವಿಂದ ಈರಣ್ಣ, ಕರಿಯಪ್ಪ, ಚಿತ್ತಪ್ಪ, ರಾಮಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.