Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಾಹುಲ್ ಗಾಂಧಿ ಪ್ರಧಾನಿ ಆಗುವುದು ಖಚಿತ : ಸಲೀಂ ಅಹಮದ್

06:34 PM Apr 15, 2024 IST | suddionenews
Advertisement

ಸುದ್ದಿಒನ್, ಹಿರಿಯೂರು, ಏಪ್ರಿಲ್. 15 :  ದೇಶ ಉಳಿಯಬೇಕೆಂದರೆ, ಅಭಿವೃದ್ಧಿ ಹೊಂದಬೇಕೆಂದರೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಸಚೇತಕ ಹಾಗೂ ಎಂಎಲ್ಸಿ ಸಲೀಂ ಅಹಮದ್ ಪ್ರತಿಪಾದಿಸಿದರು.

Advertisement

ನಗರದ ನೆಹರೂ ಮೈದಾನದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ  ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ನಿನ್ನೆ ಮೊನ್ನೆ ಹುಟ್ಟಿದ ಪಕ್ಷವಲ್ಲ. ಅದಕ್ಕೆ 150 ವರ್ಷಗಳ ಇತಿಹಾಸವಿದೆ. ತ್ಯಾಗ, ಬಲಿದಾನ, ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿರುವ ಪಕ್ಷ ನಮ್ಮದು. ದೇಶ ಕಂಡಂತಹ ಅಪ್ರತಿಮ ನಾಯಕಿ ಇಂದಿರಾಗಾಂಧಿಯವರು ಹಲವಾರು ಜನಪರ ಯೋಜನೆಗಳನ್ನ ಜಾರಿಗೆ ತಂದಿದ್ದರು. ಅವರು ತಮ್ಮ ಕೊನೆಯ ಭಾಷಣದಲ್ಲಿ ನನ್ನ ರಕ್ತ ಹಾಗೂ ಉಸಿರು ಈ ದೇಶಕ್ಕೆ ಮುಡಿಪು ಎಂದು ಪ್ರಾಣವನ್ನು ಅರ್ಪಿಸಿದ್ದರು. ಇಂತಹ ವಿಚಾರಗಳು ವಿರೋಧಿಗಳಿಗೆ ಅರ್ಥವಾಗುವುದಿಲ್ಲ. ನಿಜವಾದ ರಾಷ್ಟ್ರಭಕ್ತಿ ಏನೆಂಬುದು ಕಾಂಗ್ರೆಸ್ಸಿಗರಿಗೆ ರಕ್ತಗತವಾಗಿ ಬಂದಿದ್ದು, ಬೇರೆಯವರಿಂದ ಕಲಿಯಬೇಕಿಲ್ಲ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ಗಾಂಧಿ ಕುಟುಂಬವನ್ನು ವೃಥಾ ಟೀಕಿಸುವುದು ಕೆಲವರಿಗೆ ಹವ್ಯಾಸವಾಗಿ ಹೋಗಿದೆ. ಗಾಂಧಿ ಕುಟುಂಬದ ತ್ಯಾಗ, ಬಲಿದಾನ ಏನೆಂಬುದು ದೇಶದ ಜನರಿಗೆ ತಿಳಿದಿದೆ. ಹೀಗಾಗಿ ರಾಹುಲ್ ಗಾಂಧಿ ಪ್ರಧಾನಿ ಆಗುವುದು ಖಚಿತ ಎಂದು ಸಲೀಂ ಅಹಮದ್ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಮಾತನಾಡಿ, ಸುಳ್ಳನ್ನೇ ಪದೇ ಪದೇ ಹೇಳುವ ಮೂಲಕ ಬಿಜೆಪಿ ಜನರನ್ನು ನಂಬಿಸುವ ಕೆಲಸ ಮಾಡುತ್ತದೆ. ಅವರ ಮೋಸ ಹತ್ತು ವರ್ಷಕ್ಕೇ ಅಂತ್ಯವಾಗಬೇಕು. ಸಂವಿಧಾನ ಉಳಿವಿಗೆ ಹೋರಾಡುವ ಕಾಂಗ್ರೆಸ್, ಸಂವಿಧಾನ ಮುಗಿಸಲೇಬೇಕು ಎಂದು ಹಠಕ್ಕೆ ಬಿದ್ದಿರುವ ಬಿಜೆಪಿ ನಡುವಿನ ಹೋರಾಟ ಈ ಚುನಾವಣೆಯಾಗಿದೆ. ಬಡವರು ಹೊಟ್ಟೆ ತುಂಬಾ ಊಟ ಮಾಡೋದನ್ನೂ ಸಹ ಬಿಜೆಪಿ ಸಹಿಸಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಬಿಜೆಪಿಗರಿಗೆ ತಕ್ಕ ಪಾಠ ಕಲಿಸಿ ಎಂದು ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮಾತನಾಡಿ, ತನ್ನ ಮಾತು ಕೇಳದವರನ್ನು ಬ್ಲಾಕ್ ಮೇಲ್ ಮಾಡಿ ಹಿಂಸೆ ಕೊಟ್ಟು ರಾಜಕಾರಣ ಮಾಡುವ ಬಿಜೆಪಿಯನ್ನು ದೇಶದ ಮತದಾರರು ಸೋಲಿಸಬೇಕು. ಗೋವಿಂದ ಕಾರಜೋಳರನ್ನ ಅವರ ಜಿಲ್ಲೆಯ ಜನರೇ ತಿರಸ್ಕರಿಸಿದ್ದಾರೆ. ಮಾಜಿ ಸಿಎಂ  ಕುಮಾರಸ್ವಾಮಿಯವರು ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳುವ ಮೂಲಕ ಮಹಿಳಾ ಸಂಕುಲಕ್ಕೆ ಅವಮಾನಿಸಿದ್ದು, ಎಲ್ಲಾ ಮಹಿಳೆಯರು ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಮಾತನಾಡಿದರು. ಸಭೆಯಲ್ಲಿ ಮುಖಂಡರಾದ ಜಿ.ಎಸ್. ಮಂಜುನಾಥ್, ಡಿ.ಟಿ. ಶ್ರೀನಿವಾಸ್, ತಾಜ್ ಪೀರ್, ಎಸ್. ವಿಜಯಕುಮಾರ್,
ಖಾದಿ ರಮೇಶ್, ಈರಲಿಂಗೇಗೌಡ, ಗೀತಾ ನಂದಿನಿ ಗೌಡ, ಸಿ.ಬಿ. ಪಾಪಣ್ಣ, ಆರ್. ನಾಗೇಂದ್ರ ನಾಯ್ಕ್, ಟಿ. ಚಂದ್ರಶೇಖರ್, ಬಿ.ಎಚ್. ಮಂಜುನಾಥ್,  ಶಿವರಂಜಿನಿ ಯಾದವ್, ಚಿತ್ರಜಿತ್ ಯಾದವ್,  ಬಿ.ಎನ್. ಪ್ರಕಾಶ್, ಕಾರೆಹಳ್ಳಿ ಉಲ್ಲಾಸ್, ಕಂದಿಕೆರೆ ಸುರೇಶ್ ಬಾಬು,ಜಿ.ಎಲ್. ಮೂರ್ತಿ, ಖಾಲಿದ್ ಹುಸೇನ್, ಎ. ಮಂಜುನಾಥ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Tags :
bengaluruchitradurgarahul gandhiSalim Ahmedsuddionesuddione newssure to become Prime Ministerಚಿತ್ರದುರ್ಗಪ್ರಧಾನಿ ಆಗುವುದು ಖಚಿತಬೆಂಗಳೂರುರಾಹುಲ್ ಗಾಂಧಿಸಲೀಂ ಅಹಮದ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article