For the best experience, open
https://m.suddione.com
on your mobile browser.
Advertisement

ಚೆಕ್‍ಡ್ಯಾಂಗಳ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಚಾಲನೆ

05:46 PM Dec 05, 2024 IST | suddionenews
ಚೆಕ್‍ಡ್ಯಾಂಗಳ ನಿರ್ಮಾಣ ಕಾಮಗಾರಿಗೆ ಶಾಸಕ ಡಾ ಎಂ ಚಂದ್ರಪ್ಪ ಚಾಲನೆ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಹೊಳಲ್ಕೆರೆ, ಡಿಸೆಂಬರ್. 05 : ಬರಗಾಲದಲ್ಲೂ ರೈತರ ಅಡಿಕೆ ತೋಟ, ಜಮೀನುಗಳಿಗೆ ನೀರಿನ ಕೊರತೆಯಾಗಬಾರದೆಂದು ತಾಲ್ಲೂಕಿನಾದ್ಯಂತ ಕೆರೆ ಕಟ್ಟೆ, ಚೆಕ್‍ಡ್ಯಾಂಗಳನ್ನು ಕಟ್ಟಿಸಿದ್ದೇನೆಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

Advertisement

ಹೊಳಲ್ಕೆರೆ ತಾಲ್ಲೂಕಿನ ಗಂಜಿಕಟ್ಟೆ, ಗ್ಯಾರೆಹಳ್ಳಿ, ಕಾಗಳಗೆರೆ, ಗ್ರಾಮಗಳಲ್ಲಿ ಏಳು ಕೋಟಿ 45 ಲಕ್ಷ ರೂ.ವೆಚ್ಚದಲ್ಲಿ ನೂತನ ಚೆಕ್‍ಡ್ಯಾಂಗಳ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ರೈತರು ನೀರು, ವಿದ್ಯುತ್ ಬಿಟ್ಟರೆ ಬೇರೆ ಇನ್ನೇನು ಕೇಳುವುದಿಲ್ಲ. ಈ ಭಾಗಕ್ಕೆ ಏಳುವರೆ ಕೋಟಿ ರೂ.ಗಳನ್ನು ನೀಡಿದ್ದೇನೆ. ರೈತರ ನೋವು ನನಗೆ ಅರ್ಥವಾಗಿರುವುದರಿಂದ ಹೆಚ್ಚು ಚೆಕ್‍ಡ್ಯಾಂಗಳನ್ನು ಕಟ್ಟಿಸಿದ್ದೇನೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಮುಗಿದಿದ್ದು, ಇನ್ನು ಆರು ತಿಂಗಳೊಳಗೆ ಭದ್ರಾದಿಂದ ಕೆರೆಗಳಿಗೆ ನೀರು ತುಂಬಿಸಲಾಗುವುದು.

ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ಹದಿಮೂರು ಎಕರೆ ಹತ್ತು ಗುಂಟೆ ಜಮೀನಿನಲ್ಲಿ ನಾಲ್ಕು ನೂರು ಮೆ.ವ್ಯಾ. ವಿದ್ಯುತ್ ಉತ್ಪಾದನೆಗೆ ಐದು ನೂರು ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು. ಜೋಗ್‍ಫಾಲ್ಸ್‍ನಿಂದ ನೇರವಾಗಿ ವಿದ್ಯುತ್ ಇಲ್ಲಿಗೆ ಪೂರೈಕೆಯಾಗುತ್ತದೆ. ನಂತರ ಅಲ್ಲಿಂದ ಎಲ್ಲಾ ಸಬ್‍ಸ್ಟೇಷನ್‍ಗಳಿಗೆ ಸರಬರಾಜಾಗಲಿದೆ ಎಂದು ಹೇಳಿದರು.

ತಾಲ್ಲೂಕಿನ ನಾಲ್ಕು ನೂರು ಹಳ್ಳಿಗಳಲ್ಲಿ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ನೀರಿನ ಮಧ್ಯ ಭಾಗದಲ್ಲಿ ನಲವತ್ತು ಅಡಿ ಆಳದಲ್ಲಿ ಪಿಲ್ಲರ್ ಹಾಕಿ ಅರವತ್ತು ಕೋಟಿ ರೂ.ಗಳಲ್ಲಿ ಫಿಲ್ಟರ್ ಅಳವಡಿಸಲಾಗುವುದು. ಇದರಿಂದ ಇನ್ನು ಹತ್ತು ವರ್ಷಗಳ ಕಾಲ ಮಳೆ ಬರದಿದ್ದರೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವುದಿಲ್ಲವೆಂದರು.

ಕ್ಷೇತ್ರಾದ್ಯಂತ ಎಲ್ಲಾ ಕಡೆ ಚೆಕ್‍ಡ್ಯಾಂ, ಗುಣಮಟ್ಟದ ರಸ್ತೆ, ಶಾಲಾ-ಕಾಲೇಜು, ಹೈಟೆಕ್ ಆಸ್ಪತ್ರೆಗಳನ್ನು ಕಟ್ಟಿಸಿದ್ದೇನೆ. ಯಾರು ಏನೆ ಕೇಳಲಿ ಬಿಡಲಿ ಎಲ್ಲೆಲ್ಲಿ ಏನು ಅಗತ್ಯವಿದೆ ಎನ್ನುವುದನ್ನು ತಿಳಿದುಕೊಂಡು ಅಭಿವೃದ್ದಿ ಕೆಲಸ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರ ಯಾವುದಾದರೂ ಇರಲಿ ಹಣ ತರುವ ಚಾಣಕ್ಷತನವಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ನುಡಿದರು.

ಹೊಳಲ್ಕೆರೆ ತಾಲ್ಲೂಕು ಬಿಜೆಪಿ.ಮಂಡಲ ಅಧ್ಯಕ್ಷ ಎಂ.ಬಿ.ಸಿದ್ದೇಶ್, ಕೃಷ್ಣಪ್ಪ, ಪುರದಪ್ಪ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‍ಗಳಾದ ನಾಗರಾಜ್, ನವೀನ್ ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.

Tags :
Advertisement