ಹೊಳಲ್ಕೆರೆ | ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಡಾ.ಎಂ.ಚಂದ್ರಪ್ಪ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಹೊಳಲ್ಕೆರೆ,ಆಗಸ್ಟ್. 27 : ಎಲ್ಲರನ್ನು ಸಮಾನವಾಗಿ ಕಾಣಬೇಕೆಂಬ ದೃಷ್ಟಿಯಿಂದ ಯಾವುದೇ ಜಾತಿ ತಾರತಮ್ಯ ಮಾಡದೆ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ತಾಲ್ಲೂಕಿನ ಚಿಕ್ಕಜಾಜೂರು ಕಾವಲ್ ಗ್ರಾಮದಲ್ಲಿ ಒಂದು ಕೋಟಿ 35 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾಗಿದೆ. ಅನೇಕ ಶಾಸಕರುಗಳು ಕ್ಷೇತ್ರದಲ್ಲಿ ಬಂದು ಹೋಗಿದ್ದಾರೆ. ಆದರೆ ರಸ್ತೆಗಳು ಮಾತ್ರ ಆಗಿರಲಿಲ್ಲ. ನಾನು ಶಾಸಕನಾದಾಗಿನಿಂದಲೂ ತಾಲ್ಲೂಕಿನ 493 ಹಳ್ಳಿಗಳಲ್ಲಿಯೂ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದ್ದೇನೆ. ಹೆಣ್ಣು ಮಕ್ಕಳು ಬೀದಿಗೆ ಬಂದು ನೀರು ಹಿಡಿಯಬಾರದೆಂದು ಟ್ಯಾಂಕ್ ಕಟ್ಟಿಸಿದ್ದೇನೆ. ಚಿಕ್ಕಜಾಜೂರಿನಿಂದ ಚಿತ್ರಹಳ್ಳಿವರೆಗೆ ಹೈಟೆಕ್ ರಸ್ತೆ ಮಾಡಿಸಿದ್ದೇನೆ. ಇನ್ನು ನೂರು ವರ್ಷಗಳಾದರೂ ಒಂದು ಚಿಕ್ಕ ಗುಂಡಿಯೂ ಬೀಳುವುದಿಲ್ಲ.
ಚುನಾವಣೆಯಲ್ಲಿ ನನಗೆ ಮತ ನೀಡಿ ಗೆಲ್ಲಿಸಿದ ಪುಣ್ಯಾತ್ಮರ ಋಣ ತೀರಿಸಬೇಕೆಂಬುದನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರದಲ್ಲಿ ಯಾರು ಕೇಳಲಿ ಬಿಡಲಿ ಎಲ್ಲಿ ಏನೇನು ಸಮಸ್ಯೆಗಳಿದೆ ಎನ್ನುವುದನ್ನು ತಿಳಿದುಕೊಂಡು ಹಗಲು-ರಾತ್ರಿ ಅಭಿವೃದ್ದಿಗೆ ಶ್ರಮಿಸುತ್ತಿದ್ದೇನೆ ಮಸೀದಿ ಕಟ್ಟಲು ಐವತ್ತು ಲಕ್ಷ ರೂ.ಗಳನ್ನು ನೀಡಿದ್ದೇನೆಂದು ಹೇಳಿದರು.
ಕೊಲ್ಲಾಪುರದಮ್ಮ ದೇವಸ್ಥಾನದ ಮುಂದಿನ ಗೋಕಟ್ಟೆಗೆ ಒಂದು ಕೋಟಿ ರೂ.ಗಳನ್ನು ಕೇಳಿದ್ದಿರಿ. ನಾನು ಒಂದುವರೆ ಕೋಟಿ ರೂ.ಗಳನ್ನು ನೀಡಿದ್ದೇನೆ. ಇನ್ನು ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿರುತ್ತೇನೆ. ಸರ್ಕಾರದಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ದಿಪಡಿಸುತ್ತೇನೆ. ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ಮತದಾರರಿಗೆ ಭರವಸೆ ನೀಡಿದರು.
ಚಿಕ್ಕಜಾಜೂರು ಹತ್ತಿರ ಹಳ್ಳಕ್ಕೆ ಚೆಕ್‍ಡ್ಯಾಂ ನಿರ್ಮಿಸಲು ಒಂದು ಕೋಟಿ 37 ಲಕ್ಷ ರೂ. ಚಿಕ್ಕಜಾಜೂರು ಕಾವಲ್ ಗ್ರಾಮದ ಹತ್ತಿರ ಹಳ್ಳಕ್ಕೆ ಚೆಕ್‍ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ ಒಂದು ಕೋಟಿ 39 ಲಕ್ಷ ರೂ. ಹಾಗೂ ಚಿಕ್ಕಜಾಜೂರು ಕಾವಲ್ ಗ್ರಾಮದ ಹತ್ತಿರ ಹೊಸ ಜಿನುಗು ಕೆರೆ ನಿರ್ಮಾಣಕ್ಕೆ 92 ಲಕ್ಷ ರೂ. ಚಿಕ್ಕಜಾಜೂರು ಗ್ರಾಮದ ಜಿನುಗು ಕೆರೆ ಅಭಿವೃದ್ದಿ ಕಾಮಗಾರಿಗೆ ಇದೆ ಸಂದರ್ಭದಲ್ಲಿ ಭೂಮಿ ಪೂಜೆ ನೆರವೇರಿಸಿದರು.
ಚಿಕ್ಕಜಾಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜಲಿ ಮೋಹನ್, ಉಪಾಧ್ಯಕ್ಷ ನಾಗರಾಜ್, ಸದಸ್ಯರುಗಳಾದ ಜಮೀರ್‍ಭಾಷ, ಬಾಬು, ಶ್ರೀಕಾಂತ್, ಶ್ರೀಮತಿ ಲಕ್ಷ್ಮಿ, ಕರೀಂಭಾಷ, ಡಿ.ಸಿ.ಮೋಹನ್, ಕೃಷ್ಣಮೂರ್ತಿ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ನಾಗರಾಜ್ ಮತ್ತು ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.