ಚಿತ್ರದುರ್ಗ | ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ಅಲೆಮಾರಿ ಬುಡ್ಗ ಜಂಗಮರ ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 21 : ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ಅಲೆಮಾರಿ ಬುಡ್ಗ ಜಂಗಮರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿ ಮೂಲಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.
ನಗರ ಹಾಗೂ ಸುತ್ತಮುತ್ತಲಿನ ಬಯಲು ಪ್ರದೇಶಗಳಲ್ಲಿ ಟೆಂಟ್‍ಗಳನ್ನು ನಿರ್ಮಿಸಿಕೊಂಡು ಮಳೆ, ಚಳಿ-ಗಾಳಿಯನ್ನು ಲೆಕ್ಕಿಸದೆ ಜೀವಿಸುತ್ತಿರುವ ಅಲೆಮಾರಿ ಬುಡ್ಗ ಜಂಗಮರು ಮೂಲಭೂತ ಸೌಲಭ್ಯಗಳಾದ ರಸ್ತೆ, ನೀರು, ದೀಪ, ಚರಂಡಿ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ದಾವಣಗೆರೆ ರಸ್ತೆಯಲ್ಲಿರುವ ಕಾಪ್ರಾ ಪೆಟ್ರೋಲ್ ಬಂಕ್ ಸಮೀಪ ಹಲವು ದಶಕಗಳಿಂದ ಬುಡ್ಗ ಜಂಗಮರು ಟೆಂಟ್‍ಗಳಲ್ಲಿ ಜೀವನ ಸಾಗಿಸುತ್ತಿದ್ದು, ಕತ್ತಲೆಯಾಗಿರುವುದರಿಂದ ರಾತ್ರಿ ವೇಳೆಯಲ್ಲಿ ವಿಷ ಜಂತುಗಳಿಂದ ಕಚ್ಚಿಸಿಕೊಂಡಿರುವುದುಂಟು. ಕರಡಿ ಹಾವಳಿಯಿಂದಲೂ ಹೆದರುತ್ತಿದ್ದಾರೆ. ಜಿಲ್ಲಾಡಳಿತ ಇತ್ತ ಗಮನಹರಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಧಮ್ಮ ಸಾಂಸ್ಕøತಿಕ ಕೇಂದ್ರ ಆರ್.ವಿಶ್ವಸಾಗರ್, ಭ್ರಷ್ಠಾಚಾರ ವಿರೋಧಿ ಆಂದೋಲನ ಜಿಲ್ಲಾಧ್ಯಕ್ಷ ಹನುಮಂತಪ್ಪ ದುರ್ಗ ಇವರುಗಳು ಒತ್ತಾಯಿಸಿದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್, ಜಿಲ್ಲಾ ಅಲೆಮಾರಿ ಬುಡ್ಗ ಜಂಗಮ ಒಕ್ಕೂಟದ ಜಿಲ್ಲಾಧ್ಯಕ್ಷ ವಸಂತಕುಮಾರ್, ಕೆ.ಎನ್.ನಾಗರಾಜ, ವೀರೇಶ್, ವಿ.ಮಾರಪ್ಪ, ವಸಂತ, ಸುಜಾತಮ ಸುಂಕಮ್ಮ, ವಿಜಯಮ್ಮ ಇನ್ನು ಅನೇಕರು ಪ್ರತಿಭಟನೆಯಲ್ಲಿದ್ದರು.