ವಿಶೇಷ ವರದಿ : ಮೂರನೇ ಬಾರಿಗೆ ಕೋಡಿ ಬೀಳಲಿರುವ ವಿವಿಸಾಗರ : ಕಣ್ತುಂಬಿಕೊಳ್ಳಲು ಕಾಯುತ್ತಿರುವ ಜನಸಾಗರ
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 22 : ಜಿಲ್ಲೆಯ ಏಕೈಕ ಜೀವನಾಡಿ ವಾಣಿ ವಿಲಾಸ ಸಾಗರ ಜಲಾಶಯ ಮತ್ತೊಮ್ಮೆ ಮೈದುಂಬಿ ಕೋಡಿಬೀಳಲು ದಿನಗಣನೆ ಆರಂಭವಾಗಿದ್ದು, ಇನ್ನು ಒಂದು ಅಡಿಗಿಂತಲೂ ಕಡಿಮೆ ನೀರು ಬರಬೇಕಿದೆ. ಬಹುತೇಕ ಜನವರಿ ಮೊದಲ ವಾರದಲ್ಲಿ ತುಂಬಿ ಕೋಡಿ ಬೀಳುವ ಸಾಧ್ಯತೆ ಇದೆ. ಈ ಮೂಲಕ ಮೂರನೇ ಬಾರಿಗೆ ಕೋಡಿ ಬೀಳಲಿರುವ ವಾಣಿವಿಲಾಸ ಸಾಗರವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಕಾಯುತ್ತಿದೆ.
ಭದ್ರಾ ಜಲಾಶಯದಿಂದ ವಾಣಿ ವಿಲಾಸ ಜಲಾಶಯಕ್ಕೆ ಹರಿಸುತ್ತಿದ್ದ ಭದ್ರಾ ನೀರು ಅಜ್ಜಂಪುರ ಬಳಿ ಸೇತುವೆ ಕುಸಿತದಿಂದ ಸ್ಥಗಿತವಾಗಿದ್ದ ಒಳಹರಿವು ನೀರು ಇದೀಗ ಮತ್ತೆ ಆರಂಭವಾಗಿದೆ. ಇದರಿಂದ ವಾಣಿ ವಿಲಾಸ ಜಲಾಶಯ ಕೋಡಿ ಬೀಳುವ ಸನಿಹದಲ್ಲಿದೆ.
ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರ ಬಳಿ 1907ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ನಿರ್ಮಾಣವಾಗಿರುವ ಮಾರಿಕಣಿವೆ ಜಲಾಶಯ, ಮೂರನೇ ಬಾರಿಗೆ ಕೋಡಿ ಬೀಳಲು ತುದಿಗಾಲಲ್ಲಿ ನಿಂತಿದೆ.
ಜಲಾಶಯದಲ್ಲಿನ ಪ್ರಸ್ತುತ ನೀರಿನ ಮಟ್ಟ 129.15 ಅಡಿ ಇದ್ದು, ಜಲಾಶಯ ಕೋಡಿ ಬೀಳಲು 0.85 ಅಡಿ ನೀರು ಬರಬೇಕಿದೆ. ಕಳೆದೊಂದು ವಾರದಿಂದ ಸ್ಥಗಿತಗೊಂಡಿದ್ದ ಭದ್ರಾ ಒಳಹರಿವು ನೀರು ಮತ್ತೆ ಆರಂಭವಾಗಿದ್ದು, ಪ್ರತಿದಿನ 700 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. 1935ರಲ್ಲಿ ಒಮ್ಮೆ ಜಲಾಶಯ ಮೊದಲ ಬಾರಿಗೆ ಕೋಡಿ ಬಿದ್ದಿತ್ತು. ನಂತರ 2022ರಲ್ಲಿ ಎರಡನೇ ಬಾರಿಗೆ ಡ್ಯಾಂ ಕೋಡಿ ಬಿದ್ದು, ಸರಿಸುಮಾರು ಎರಡು ತಿಂಗಳ ಕಾಲ ವೇದಾವತಿ ನದಿ ಹರಿದಿತ್ತು. ಇದೀಗ ಮೂರನೇ ಬಾರಿಗೆ ಕೋಡಿ ಬೀಳಲು ಜಲಾಶಯ ಸಜ್ಜಾಗಿದೆ.
ಭದ್ರಾ ಡ್ಯಾಂ ತುಂಬಿದ್ದು, ಭದ್ರಾ ಜಲಾಶಯದಿಂದ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಜನವರಿ ಅಂತ್ಯದವರೆಗೆ ಪ್ರತಿ ದಿನ 700 ಕ್ಯೂಸೆಕ್ ನೀರು ಹರಿಸುವಂತೆ ಸರ್ಕಾರ ಆದೇಶಿಸಿತ್ತು. ಆದರೆ ಅಜ್ಜಂಪುರ ಬಳಿ ಸೇತುವೆ ಕುಸಿದು ನೀರನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಪರ್ಯಾಯ ಅಂದರೆ ಹೊಸ ಸೇತುವೆ ನಿರ್ಮಾಣ ಮಾಡಿ ನೀರು ಹರಿಸಲಾಗುತ್ತಿದೆ. ಇಂದಿನಿಂದ ಒಳಹರಿವು ನೀರು ಹರಿದು ಬರುತ್ತಿದೆ.
ಹೆಚ್ಚು ನೀರು ಸಂಗ್ರಹವಾದ ವರ್ಷ :
1917 ರಲ್ಲಿ 120.60 ಅಡಿ,
1918ರಲ್ಲಿ 121.30 ಅಡಿ,
1919ರಲ್ಲಿ 128.30, ಅಡಿ
1920ರಲ್ಲಿ 125.50, ಅಡಿ
1932ರಲ್ಲಿ 125.50, ಅಡಿ,
1933ರಲ್ಲಿ 135.25 ಅಡಿ,
1934ರಲ್ಲಿ 130.24 ಅಡಿ,
1935ರಲ್ಲಿ 123.22 ಅಡಿ,
1956ರಲ್ಲಿ 125.00 ಅಡಿ,
1957ರಲ್ಲಿ 125.05 ಅಡಿ,
1958ರಲ್ಲಿ 124.50 ಅಡಿ,
2000ರಲ್ಲಿ 122.50ಅಡಿ,
2021ರಲ್ಲಿ 125.50 ಅಡಿ,
2022ರಲ್ಲಿ 135.00 ಅಡಿ,
2024ರಲ್ಲಿ ( ಈ ವರ್ಷ)ರಲ್ಲಿ 129.15 ಅಡಿ ನೀರು ಸಂಗ್ರಹವಾಗಿದೆ.
ವಿವಿ ಸಾಗರ ಜಲಾಶಯ ಮೂರನೇ ಬಾರಿ ಕೋಡಿ ಬೀಳುವ ಕಾಲ ತೀರಾ ಸನಿಹಕ್ಕೆ ಬರುತ್ತಿರುವ ಹೊತ್ತಲ್ಲಿ ಕೋಡಿ ಬೀಳುವ ಸಂದರ್ಭವನ್ನು ಬಹಳ ನಾಜೂಕಾಗಿ ರಾಜಕೀಯ ಲಾಭ ಮತ್ತು ಹಳೆಯ ಆಪಾದನೆಗಳನ್ನು ತೊಳೆದುಕೊಳ್ಳುವುದಕ್ಕೆ ಬಳಸಿಕೊಳ್ಳುವ ಮೂಲಕ ಸಚಿವರು ಮತ್ತೊಂದು ಚಾಕಚಕ್ಯತೆಯ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ. 2018 ರ ಹಿಂದಿನ ಅವಧಿಯಲ್ಲಿ ತಾಲೂಕಲ್ಲಿ ಬರ ಆವರಿಸಿ ಲಕ್ಷಾಂತರ ತೆಂಗಿನಮರಗಳು ಒಣಗಿ ಹೋಗಿದ್ದವು. 2018 ರ ಚುನಾವಣೆಯಲ್ಲಿ ಇದೇ ವಿಷಯ ಬಹುದೊಡ್ಡ ಚರ್ಚೆಯಾಗಿ ಸಚಿವರ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಆನಂತರ ಗೆದ್ದ ಬಿಜೆಪಿ ಶಾಸಕರ ಅವಧಿಯಲ್ಲಿ 2022 ರಲ್ಲಿ ವಿವಿ ಸಾಗರ ಜಲಾಷಯ ಕೋಡಿ ಬಿತ್ತು. ಅವರ ಪಕ್ಷ ಮತ್ತು ಅವರ ಬೆಂಬಲಿಗರು ಪ್ರಕೃತಿ ನಿಯಮದಂತೆ ಕೋಡಿ ಬಿದ್ದಿದೆ ಎಂಬುದನ್ನು ಮರೆತು ಕಾಲ್ಗುಣ, ಭಾಗೀರಥಿ ಎಂದೆಲ್ಲ ಪ್ರಚಾರ ಪಡೆದರು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮಳೆ ಪ್ರಮಾಣ ಕಡಿಮೆ ಹಾಗೂ ಬರ ಇರುತ್ತದೆ ಎಂಬ ಅಪಪ್ರಚಾರ ತೊಳೆಯಲು ಇದೀಗ ಸಚಿವರು ತಮ್ಮ ಅಧಿಕಾರದ ಅವಧಿಯಲ್ಲೂ ಜಲಾಷಯ ಕೋಡಿ ಬೀಳಲಿದ್ದು, ಹಿಂದಿನ ಎಲ್ಲಾ ಅಪ ಪ್ರಚಾರಗಳಿಗೂ ತೆರೆ ಎಳೆಯುವ ಮುಂಗನಸ್ಸಿನಲ್ಲಿರುವಂತಿದೆ.
ಕೋಡಿ ಬಿದ್ದಾಗ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಕರೆಸಿ ಬಾಗಿನ ಅರ್ಪಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಯಾರ ಅವಧಿ, ಯಾರ ಆಡಳಿತವಾದರೇನು ಕೋಡಿ ಬಿದ್ದು ವರ್ಷವೆಲ್ಲಾ ನೀರಿಗೆ ಬರ ಇರದಿದ್ದರೆ ಸಾಕು ಎಂಬುದು ರೈತರ, ಸಾರ್ವಜನಿಕರ ಅಭಿಪ್ರಾಯವಾಗಿದೆ.
ಜುಲೈ ತಿಂಗಳ ಅಂತ್ಯದಲ್ಲಿ 113.08 ರಷ್ಟಿದ್ದ ಜಲಾಶಯದ ನೀರಿನ ಮಟ್ಟ ಡಿಸೆಂಬರ್ 13ರ ಹೊತ್ತಿಗೆ 129.10 ಅಡಿ ಮುಟ್ಟಿದೆ. ಕೇವಲ ಐದು ತಿಂಗಳಲ್ಲಿ 16 ಅಡಿಯಷ್ಟು ನೀರು ಸಂಗ್ರಹವಾಗಿದ್ದು ಜಿಲ್ಲೆಯ ಜನರ ನೀರಿನ ಬವಣೆ ನೀಗಿಸಲಿದೆ.
ಬರಗಾಲದ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಈ ಭಾಗಕ್ಕೆ ವಿವಿ ಸಾಗರ ಜಲಾಶಯವೇ ಆಧಾರಸ್ಥಂಭವಾಗಿದೆ. ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲೂಕುಗಳ ಜನರ ಕುಡಿಯುವ ನೀರಿನ ದಾಹ ಹಿಂಗಿಸುವ ಜಲಾಶಯವು 12135 ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಬಂದAತಹ ಸ್ಥಿತಿಯಲ್ಲಿ ಮೈಸೂರು ಮಹಾರಾಜರು ತಾಲೂಕಿನ ಮಾರಿಕಣಿವೆ ಬಳಿ 1907 ರಲ್ಲಿ ಜಲಾಶಯ ನಿರ್ಮಿಸಿದರು.
ಜಲಾಶಯದ ನಿರ್ಮಾಣದ ಕಾಲದಲ್ಲಿ ಸಂಪನ್ಮೂಲದ ಕೊರತೆ ಉಂಟಾಗಿದ್ದರಿಂದ ಮಹಾರಾಣಿಯವರ ಒಡವೆ ಅಡವಿಟ್ಟು ಹಣ ಹೊಂದಿಸಿ ಜಲಾಶಯ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದರು ಎನ್ನಲಾಗಿದೆ. ಮೈಸೂರು ಅರಸರ ದೂರದೃಷ್ಟಿಯ ಆಲೋಚನೆಯಿಂದ ನೂರಾರು ವರ್ಷಗಳಿಂದ ಈ ಭಾಗದ ಜನ ಜಾನುವಾರುಗಳ ಕುಡಿಯುವ ನೀರಿನ ದಾಹ ನೀಗಿ ಸಾವಿರಾರು ಎಕರೆ ನೀರಾವರಿ ಸೌಲಭ್ಯ ಪಡೆದಿವೆ. ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದರೂ ನೀರುಣಿಸುತ್ತಲೇ ಇರುವ ಜಲಾಷಯವು 129 ಕಿಮೀ ಉದ್ದದ ಕಾಲುವೆ ಹೊಂದಿದೆ.
ಜಲಾಶಯ ನಿರ್ಮಾಣ ವಾಗಿ ಶತಮಾನ ಕಳೆದರೂ ಸಹ ಇಂದಿಗೂ ಗಟ್ಟಿ ಮುಟ್ಟಾಗಿದ್ದು ಇದರ ನಿರ್ಮಾಣಕ್ಕೆ ಕೇವಲ ಕಲ್ಲು ಮತ್ತು ಗಾರೆಯನ್ನು ಮಾತ್ರ ಬಳಸಲಾಗಿದೆ ಎಂಬುದು ಮತ್ತೊಂದು ವಿಶೇಷ. ಜಲಾಶಯ ನಿರ್ಮಾಣವಾಗಿ 26 ವರ್ಷಗಳ ನಂತರ ಅಂದರೆ 1933 ರಲ್ಲಿ ಮೊದಲ ಬಾರಿಗೆ ಕೋಡಿ ಬಿದ್ದಿತ್ತು. ಆನಂತರ ಸತತವಾಗಿ 89 ವರ್ಷಗಳ ಕಾಲ ಜಲಾಷಯ ಕೋಡಿ ಬೀಳಲೇ ಇಲ್ಲ.
2022 ರ ಸೆಪ್ಟೆಂಬರ್ ತಿಂಗಳಲ್ಲಿ 89 ವರ್ಷದ ನಂತರ ಕೋಡಿ ಬಿದ್ದ ಜಲಾಶಯ ಈ ತಲೆಮಾರಿನ ಜನಕ್ಕೆ ಆಶ್ಚರ್ಯ ಮತ್ತು ಅಪರೂಪದ ಚಿತ್ರಣ ಒದಗಿಸಿತ್ತು. ಇದೀಗ ಕೇವಲ ಅದಾಗಿ ಎರಡೇ ವರ್ಷಕ್ಕೆ ಮತ್ತೆ ಅಂತಹುದೊAದು ಸುವರ್ಣ ಗಳಿಗೆಗೆ ತಾಲೂಕು ಮತ್ತು ಜಿಲ್ಲೆ ಸಾಕ್ಷಿಯಾಗುವ ಕ್ಷಣಗಳು ಹತ್ತಿರ ಬರುತ್ತಿವೆ.
ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿಯಲ್ಲಿ ಜನಿಸುವ ವೇದಾ ನದಿಯು ಮುಂದೆ ಸಾಗಿ ಕಡೂರಿನ ಬಳಿ ಅವತಿ ನದಿ ಜೊತೆ ಸೇರಿ ವೇದಾವತಿ ನದಿಯಾಗಿ ಹರಿದು ವಿವಿ ಸಾಗರದ ಒಡಲು ಸೇರುತ್ತದೆ.117 ವರ್ಷಗಳ ಇತಿಹಾಸವಿರುವ ಜಲಾಶಯದ ಎತ್ತರ 135.25 ಅಡಿ ಇದ್ದು ತಾಲೂಕಿನ ಮೂರನೇ ಒಂದು ಭಾಗದಷ್ಟು ರೈತರ ಜಮೀನುಗಳಿಗೆ ನೀರು ಒದಗಿಸುತ್ತದೆ. ಇದೀಗ ಮೂರನೇ ಬಾರಿಗೆ ಕೋಡಿ ಬೀಳುವ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ಜನ ತುದಿಗಾಲಲ್ಲಿ ನಿಂತಿದ್ದು ಆದಷ್ಟು ಬೇಗ ರೈತರ ಆ ಕನಸು ಈಡೇರಲಿ ಎನ್ನುವುದೇ ಸರ್ವರ ಆಶಯ.