ಚಿತ್ರದುರ್ಗ ಜಿ.ಪಂ. ಎದುರು ಹಮಾಲಿ ಕಾರ್ಮಿಕರು ಮತ್ತು ಗ್ರಾ. ಪಂ. ನೌಕರರ ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 18 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್, ಗ್ರಾಮ ಪಂಚಾಯಿತಿ ನೌಕರರು ಜಿಲ್ಲಾ ಪಂಚಾಯಿತಿ ಎದುರು ಸಿ.ಐ.ಟಿ.ಯು. ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಕರ ವಸೂಲಿಗಾರ, ಗುಮಾಸ್ತ, ಡಾಟಾ ಎಂಟ್ರಿ ಆಪರೇಟರ್ಸ್ ನೀರುಗಂಟಿಗಳು, ಜವಾನ, ಸ್ವಚ್ಚಗಾರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ದಿನನಿತ್ಯ ಬಳಕೆಯ ಪದಾರ್ಥಗಳ ಬೆಲೆ ಏರಿಕೆಯಾಗಿರುವುದರಿಂದ ಮಾಸಿಕ 31 ಸಾವಿರ ರೂ.ಗಳ ವೇತನ ನಿಗಧಿಪಡಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ನಿವೃತ್ತಿ/ ಮರಣ ಹೊಂದಿದರೆ ಪ್ರತಿ ತಿಂಗಳು ಕನಿಷ್ಟ ಆರು ಸಾವಿರ ರೂ.ಪಿಂಚಣಿ ಕೊಡಬೇಕು. ಗ್ರಾಮ ಪಂಚಾಯಿತಿಗಳಿಗೆ ಎರಡನೆ ಡಾಟಾ ಎಂಟ್ರಿ ಆಪರೇಟರ್ಸ್ ಹುದ್ದೆಗೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ ಈಗಾಗಲೆ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವ ಡಾಟಾ ಎಂಟ್ರಿ ಆಪರೇಟರ್ಸ್‍ಗಳನ್ನು ನೇಮಕ ಮಾಡಿಕೊಂಡು ಮುಂದುವರೆಸಬೇಕು. ಕಂಪ್ಯೂಟರ್ ಜ್ಞಾನ ಹೊಂದಿದವರಿಗೆ ಅವಕಾಶ ಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನೀರುಗಂಟಿಗಳಿಗೆ ಮಲ್ಪಿ ಪರ್ಪಸ್ ಎನ್ನುವುದನ್ನು ಕೈಬಿಟ್ಟು ನಿರ್ಧಿಷ್ಟವಾದ ಕೆಲಸ ನೀಡಬೇಕು. ಆದಾಯಕ್ಕನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗಧಿಪಡಿಸಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೆ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಿ ಐ.ಪಿ.ಡಿ.ಸಾಳಪ್ಪ ವರದಿಯಂತೆ ಸ್ವಚ್ಚತಾಗಾರರನ್ನು ನೇಮಿಸಬೇಕು.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ 23 ಅಸಂಘಟಿತ ವಲಯದ ಕಾರ್ಮಿಕರಿಗೆ ಅಪಘಾತದಿಂದಾದ ಮರಣ, ಅಂಗವೈಕಲ್ಯ
ಚಿಕಿತ್ಸೆಗೆ ಪರಿಹಾರವನ್ನು ಜಾರಿ ಮಾಡಿರುವುದು ಸರಿಯಷ್ಟೆ. ಕಾರ್ಮಿಕರು ಜೀವಂತವಾಗಿರುವಾಗಲೆ ನೆರವಾಗುವಂತ ಭವಿಷ್ಯನಿಧಿ, ಪಿಂಚಣಿ, ಶಿಕ್ಷಣ, ಆರೋಗ್ಯ ಇನ್ನು ಮುಂತಾದ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಹಮಾಲಿ ಕಾರ್ಮಿಕರು ಸೇರಿದಂತೆ ವಿವಿಧ ವಲಯದ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಸಿದ್ದಪಡಿಸಿರುವ ಭವಿಷ್ಯ ನಿಧಿ ಯೋಜನೆ (ಪಶ್ಚಿಮ ಬಂಗಾಳ ಮಾದರಿ) ಯಂತೆ ಕಾನೂನು ಸ್ವರೂಪದಲ್ಲಿ ಜಾರಿಗೊಳಿಸಲು 2024-25 ನೇ ರಾಜ್ಯ ಬಜೆಟ್‍ನಲ್ಲಿ ಐದು ನೂರು ಕೋಟಿ ರೂ.ಗಳನ್ನು ಮೀಸಲಿಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಡಿ.ಎಂ.ಮಲಿಯಪ್ಪ, ಸಿ.ಕೆ.ಗೌಸ್‍ಪೀರ್, ಟಿ.ನಿಂಗಣ್ಣ, ಹೆಚ್.ಓ.ನಾಗರಾಜ್, ಟಿ.ತಿಪ್ಪೇಸ್ವಾಮಿ, ನಿಂಗಮ್ಮ ಇವರುಗಳು ಪ್ರತಿಭಟನೆಯಲ್ಲಿದ್ದರು.