For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ವೇದಾಂತ ಮೈನ್ಸ್ ವಿರುದ್ದ ವಿವಿಧ ಸಂಘಟನೆಗಳ ಧರಣಿ ಸತ್ಯಾಗ್ರಹ

05:37 PM Dec 08, 2024 IST | suddionenews
ಚಿತ್ರದುರ್ಗ   ವೇದಾಂತ ಮೈನ್ಸ್ ವಿರುದ್ದ ವಿವಿಧ ಸಂಘಟನೆಗಳ ಧರಣಿ ಸತ್ಯಾಗ್ರಹ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 08 : ಅಕ್ರಮವಾಗಿ ಅದಿರು ಸಾಗಾಟ ಮಾಡುತ್ತಿರುವ ವೇದಾಂತ ಮೈನ್ಸ್ ವಿರುದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾನುವಾರದಿಂದ ಧರಣಿ ಸತ್ಯಾಗ್ರಹ ಕುಳಿತಿದ್ದಾರೆ.

Advertisement

ಭೀಮಸಮುದ್ರದ ದಿಂಡದಹಳ್ಳಿ ಸಮೀಪ ಧರಣಿ ಕುಳಿತಿರುವವರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಫೋಟೋ ಮುಂದಿಟ್ಟುಕೊಂಡು ಸ್ಥಳೀಯರಿಗೆ ಉದ್ಯೋಗ ನೀಡದೆ ಹೊರ ರಾಜ್ಯದವರನ್ನು ಕರೆಸಿಕೊಂಡಿರುವುದರ ವಿರುದ್ದ ಧಿಕ್ಕಾರಗಳನ್ನು ಕೂಗಿ ನ್ಯಾಯಕ್ಕಾಗಿ ಪಟ್ಟು ಹಿಡಿದರು.

2013 ರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ವಿ.ಪಿ.ಇಕ್ಕೇರಿ ವೇದಾಂತ ಗಣಿ ಮೈನ್ಸ್, ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆ ನಡೆಸಿ 40:60 ಅನುಪಾತದಡಿ ಅದಿರು ಸಾಗಾಣಿಕೆಯಾಗಣಿಕೆ ಮಾಡಬೇಕೆಂದು ಆದೇಶಿಸಿದ್ದರು. ಆದರೆ ವೇದಾಂತ ಗಣಿ ಮೈನ್ಸನವರು ನಿಯಮಗಳನ್ನು ಮೀರಿ ಸಂಪೂರ್ಣವಾಗಿ ಅದಿರನ್ನು ರೈಲಿನಲ್ಲಿ ಸಾಗಾಗಿಸುತ್ತಿದ್ದಾರೆ. ಇದರಿಂದ ಎರಡು ಸಾವಿರಕ್ಕೂ ಹೆಚ್ಚು ಲಾರಿ ಮಾಲೀಕರು, ಚಾಲಕರುಗಳು ಜೀವನಕ್ಕೆ ದಾರಿ ತೋಚದೆ ಬೀದಿಗೆ ಬಿದ್ದಿದ್ದಾರೆ. ಖಾಸಗಿ ಫೈನಾನ್ಸ್ ಗಳಲ್ಲಿ ಸಾಲ ಮಾಡಿ ಲಾರಿಗಳನ್ನು ಖರೀದಿಸಿರುವವರು ಮಾಸಿಕ ಕಂತು ಕಟ್ಟಲು ಆಗದೆ ವಿಷ ಕುಡಿಯುವ ಪರಿಸ್ಥಿತಿಗೆ ತಲುಪಿದ್ದಾರೆಂದು ಧರಣಿನಿರತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಭೀಮಸಮುದ್ರದ ಸಿರಾಜ್ ಗೇಟ್-3 ರೋಡ್ ಓಪನ್ ಮಾಡಿ ಲಾರಿಗಳಲ್ಲಿ ಅದಿರು ಸಾಗಾಣಿಕೆಗೆ ಅವಕಾಶ ಕೊಡಬೇಕೆಂದು ಹಲವಾರು ವರ್ಷಗಳಿಂದಲೂ ನಮ್ಮ ಬೇಡಿಕೆಯಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ, ಹೊಳಲ್ಕೆರೆ ವಲಯ ಅರಣ್ಯಾಧಿಕಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ವೇದಾಂತ ಮೈನ್ಸ್‍ನೊಂದಿಗೆ ಅಕ್ರಮ ಅದಿರು ಸಾಗಾಣಿಕೆಗೆ ಕೈಜೋಡಿಸಿದ್ದಾರೆ. ಅರಣ್ಯ ಇಲಾಖೆಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದು, ದಿನಕ್ಕೆ 25 ಸಾವಿರ ಟನ್ ಅದಿರು ಸಾಗಾಣಿಕೆಯಾಗುತ್ತಿದೆ. ಒಂದು ದಿನಕ್ಕೆ ಏನಿಲ್ಲವೆಂದರೂ ನೂರು ಕೋಟಿ ರೂ ವಹಿವಾಟು ನಡೆಯುತ್ತಿದೆ ಎಂದು ಆಪಾದಿಸಿದರು.

ಲಾರಿಗಳಲ್ಲಿ ಅದಿರು ಸಾಗಾಣಿಕೆ ಮಾಡುವುದನ್ನು ನಿಲ್ಲಿಸಿ ಮೂರು ವರ್ಷಗಳಾಗಿದೆ. ಇದನ್ನೆ ನೆಚ್ಚಿಕೊಂಡಿರುವ ಸಾವಿರಾರು ಕುಟುಂಬಗಳು ಜೀವನಕ್ಕೆ ದಾರಿ ಕಾಣದೆ ಚಿಂತಾಕ್ರಾಂತರಾಗಿದ್ದಾರೆ. ಸ್ಥಳೀಯರನ್ನು ಕಡೆಗಣಿಸಿ ಅನ್ಯ ರಾಜ್ಯದವರನ್ನು ಇಲ್ಲಿಗೆ ಕರೆಸಿಕೊಂಡಿರುವ ವೇದಾಂತ ಗಣಿ ಮೈನ್ಸ್‍ನವರು ರಾತ್ರಿಯಿಡಿ ಅದಿರು ಸಾಗಾಟ ಮಾಡುತ್ತಿರುವುದರಿಂದ ಮಾರ್ಗ ಮಧ್ಯದಲ್ಲಿ ಸಾಕಷ್ಟು ಕಾಡು ಪ್ರಾಣಿಗಳು ಬಲಿಯಾಗುತ್ತಿವೆ. ಜಿಲ್ಲಾಡಳಿತ ಇತ್ತ ಗಮನ ಹರಿಸಿ ಅಕ್ರಮ ಅದಿರು ಸಾಗಾಣಿಕೆಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಕಕ್ಷ ಟಿ.ರಮೇಶ್ ಧರಣಿಯನ್ನುದ್ದೇಶಿಸಿ ಮಾತನಾಡುತ್ತ ಸ್ಥಳೀಯರನ್ನು ನಿರ್ಲಕ್ಷಿಸಿ ಉತ್ತರ ಭಾರತದಿಂದ ಜನರನ್ನು ಕರೆಸಿಕೊಂಡು ಅಕ್ರಮವಾಗಿ ರೈಲಿನ ಮೂಲಕ ವೇದಾಂತ ಗಣಿ ಮೈನ್ಸ್‍ನವರು ಅದಿರು ಸಾಗಾಣಿಕೆ ಮಾಡುತ್ತಿರುವುದನ್ನು ಪ್ರಶ್ನಿಸುವ ಲಾರಿ ಮಾಲೀಕರು, ಚಾಲಕರುಗಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಇದಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆಯ ಕುಮ್ಮಕ್ಕಿದೆ. ಗಣಿಗಾರಿಕೆಗೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಗಿಡ-ಮರಗಳ ನಾಶವಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಸಸಿಗಳನ್ನು ಬೆಳೆಸಬೇಕಿತ್ತು. ಇದ್ಯಾವುದರ ಕಡೆ ಗಮನ ಹರಿಸದ ವೇದಾಂತ ಮೈನ್ಸ್‍ನವರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಲಾರಿಗಳ ಮೂಲಕ ಅದಿರು ಸಾಗಾಣಿಕೆಗೆ ಅವಕಾಶ ಕೊಡುವತನಕ ಧರಣಿಯಿಂದ ಹಿಂದೆ ಸರಿಯುವುದಿಲ್ಲವೆಂದು ಎಚ್ಚರಿಸಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಂ, ವೀರಶೈವ ಲಿಂಗಾಯಿತ ಯುವ ವೇದಿಕೆ ಅಧ್ಯಕ್ಷ ಹೆಚ್.ಎಂ.ಮಂಜುನಾಥ್, ಹನೀಸ್, ಸೈಯದ್ ಖುದ್ದೂಸ್, ಲಾರಿ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಇಮ್ರಾನ್(ಬುಳ್ಳ) ಶಿವರಾಜ್, ವಿಜಯಕುಮಾರ್, ನಾಗರಾಜ್, ವಸೀಂ, ಪ್ರಕಾಶ್ ರಾಮನಾಯ್ಕ ಇನ್ನು ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

Tags :
Advertisement