ಚಿತ್ರದುರ್ಗ | ಪಿಳ್ಳೇಕೆರೆನಹಳ್ಳಿ ಬಳಿ ಅಂಡರ್ ಪಾಸ್ ನಿರ್ಮಿಸಿ : ಶಾಸಕ ವೀರೇಂದ್ರ ಸೂಚನೆ
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.23 : ಪಿಳ್ಳೇಕೆರೆನಹಳ್ಳಿ ಗ್ರಾಮದ ಬಳಿ ಸ್ಕೈವಾಕರ್ ನಿರ್ಮಿಸುವ ಬದಲಾಗಿ ಅಂಡರ್ ಪಾಸ್ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಸೂಚಿಸಿದ್ದಾರೆ.
ಪಿಳ್ಳೇಕೆರೆನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 13 ಹಾದು ಹೋಗಿದ್ದು, ಈ ರಸ್ತೆ ಮೇಲ್ದರ್ಜೆಗೇರಿಸುವ ಸಮಯದಲ್ಲಿ ಒಂದು ಅಂಡರ್ ಪಾಸ್ ನಿರ್ಮಾಣ ಮಾಡುವುದಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆಸ್ವಾಸನೆ ನೀಡಿರುತ್ತಾರೆ. ಆದರೆ ಹೈವೇ ಪೂರ್ಣಗೊಂಡರೂ ಸಹ ಅಂಡರ್ ಪಾಸ್ ನ್ನು ನಿರ್ಮಾಣ ಮಾಡದೇ ಇರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿರುತ್ತದೆ. ಈ ಕಾರಣದಿಂದಾಗಿ ಗ್ರಾಮಸ್ಥರು ಅಂಡರ್ ಪಾಸ್ ನಿರ್ಮಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ಈ ಭಾಗದ ಎಲ್ಲಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಮಾತ್ರ ನಡೆಯಲೇ ಇಲ್ಲ. ಇದರಿಂದಾಗಿ ಇಲ್ಲಿನ ಸ್ಥಳೀಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಶಾಸಕ ವೀರೇಂದ್ರ ಅವರಲ್ಕಿಯೂ ಸಹಾ ಮನವಿ ಸಲ್ಲಿಸಿದ್ದರು.
ಈ ಮನವಿಗೆ ಸ್ಪಂದಿಸಿದ ಶಾಸಕರು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಕೂಡಲೇ ಇಲ್ಲಿ ಅಂಡರ್ ಪಾಸ್ ನಿರ್ಮಿಸುವಂತೆ ಸೂಚಿಸಿದ್ದಾರೆ.
ಶಾಸಕರು ನೀಡಿರುವ ಪತ್ರದ ಸಾರಾಂಶ :
ಪಿಳ್ಳೇಕೆರೇನಹಳ್ಳಿ ಬಳಿ ಸ್ಕೈ ವಾಕರ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಹೋಗಿರುತ್ತಾರೆ. ಈ ಊರಿನ ಹತ್ತಿರ ಸೈವಾಕರ್ ನಿರ್ಮಾಣ ಮಾಡಿದರೆ ಕೆಲವು ವ್ಯಕ್ತಿಗಳು ಮದ್ಯಪಾನ ಮಾಡುವುದು, ಗಾಂಜ ಸೇದುವುದು, ರಾತ್ರಿವೇಳೆ ಗಲಾಟೆ ಮಾಡುವುದು, ಕಾನೂನು ಬಾಹಿರ ಚಟುಟಿಕೆಗಳನ್ನು ಮಾಡುವುದು ಮತ್ತು ಮಲಮೂತ್ರ ವಿಸರ್ಜನೆ ಮಾಡುವುದರಿಂದ ಈ ಭಾಗದಲ್ಲಿ ವಾಸವಾಗಿರುವ ಸಾರ್ವಜನಿಕರಿಗೆ, ಮಹಿಳೆಯರಿಗೆ, ಶಾಲಾ ಮಕ್ಕಳಿಗೆ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತು ಹಿರಿಯ ನಾಗರೀಕರು ಹಾಗೂ ಶವಸಂಸ್ಕಾರಕ್ಕೆ ಸ್ಕೈ ವಾಕರ್ ಮೇಲೆ ಓಡಾಡಲು ಹಾಗೂ ದನಕರುಗಳಿಗೆ ಓಡಾಡಲು ತೊಂದರೆ ಉಂಟಾಗುತ್ತದೆ. ಆದ್ದರಿಂದ ತಾವುಗಳು ಸ್ಕೈ ವಾಕರ್ ಯೋಜನೆಯನ್ನು ಕೈಬಿಟ್ಟು 2.5 ಮೀ. ಅಂಡರ್ ಪಾಸ್ ನಿರ್ಮಾಣ ಮಾಡಿಕೊಡಬೇಕೆಂದು ಸೂಚಿಸಿದ್ದಾರೆ.