ಅಕ್ಷರ ಕಲಿಸಿದ ಶಾಲೆಗೆ ಅನನ್ಯ ಕೊಡುಗೆ: ತುರುವನೂರಿನಲ್ಲಿ ಹಳೇ ವಿದ್ಯಾರ್ಥಿಗಳ ಅಪರೂಪದ ಕಾರ್ಯ
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್, 06 : ಜನ್ಮಕೊಟ್ಟ ತಂದೆ-ತಾಯಿ, ಬದುಕು ಕೊಟ್ಟ ಹುಟ್ಟೂರು, ಅಕ್ಷರ ಕಲಿಸಿದ ಗುರು ಮತ್ತು ವಿದ್ಯೆ ಕಲಿಸಿದ ಶಾಲೆಯ ಸ್ಮರಣೆ ಸದಾ ಇರಬೇಕು. ಆಗ ಮಾತ್ರ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂಬುದು ಹಿರಿಯರ ಮಾತು.
ಇಂತಹ ನಡೆಗೆ ತುರುವನೂರು ಜಿಎಚ್‌ಪಿಎಸ್ ಬಾಲಕರ ಶಾಲೆ ಗಮನಸೆಳೆದಿದೆ. ಇಲ್ಲಿ ಓದಿದ ಅನೇಕರು ಈಗ ವಿವಿಧ ಉನ್ನತ ಹುದ್ದೆಗಳಲ್ಲಿದ್ದಾರೆ. ಬಹುತೇಕರು ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅದರೆ, ಅವರೆಲ್ಲಿ ಬಹುತೇಕರು ಶಾಲೆಯ ಪ್ರಗತಿಗೆ, ಮಕ್ಕಳ ಕಲಿಕೆಗೆ ಪೂರಕವಾಗಿ ದಾನದ ಕಾರ್ಯ ಕೈಗೊಂಡಿದ್ದಾರೆ.
ನಮ್ಮೂರ ಶಾಲೆ ನಮ್ಮ ಹೆಮ್ಮೆ ಎಂಬ ಮಾತನ್ನು ಈ ಶಾಲೆಯಲ್ಲಿ ಓದಿದ ಹಳೇ ವಿದ್ಯಾರ್ಥಿಗಳ ಕಾರ್ಯ ದೃಢಪಡಿಸಿದ್ದು, ಔದಾರ್ಯದ ಮನೋಭವದೊಂದಿಗೆ ವಿವಿಧ ರೀತಿ ಶಾಲೆಗೆ ಕೊಡುಗೆ ನೀಡುತ್ತಿದ್ದಾರೆ. ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪನೆ ಮಾಡಿಕೊಂಡು ಶಾಲೆಯ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಹಿರಿಯ ನಾಗರಿಕ ಸದಸ್ಯರನ್ನು ಒಳಗೊಂಡ ಚೈತನ್ಯದ ಚಿಲುಮೆಯಂತಿರುವ ಈ ಸಮೂಹ ಅತ್ಯಂತ ವಿಶಿಷ್ಟ ಹಾಗೂ ವಿಶೇಷ ಅಭಿರುಚಿಯುಳ್ಳ ತಂಡವಾಗಿದೆ. ತುರುವನೂರು ಬಾಲಕರ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿರುವುದು ಮಾದರಿ ಮತ್ತು ಅನುಕರಣೀಯವಾಗಿದೆ.
ಈ ಸಂಘದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕಿ ಶಶಿಕಲಾ, ಮೋಹನ್, ರವಿಶಂಕರ್, ಬಸವರಾಜ್, ಸುರೇಶ್, ರಾಜಣ್ಣ, ಶ್ರೀವೀರ ಬ್ರಹ್ಮಾಚಾರ್ ಸೇರಿ ಅನೇಕರು ಶಾಲೆಗೆ 6 ತಿಂಗಳಿಂದ ನಿಯಮಿತವಾಗಿ ಭೇಟಿ ನೀಡುವ ಜೊತೆಗೆ ಕಲಿಕೆಗೆ ಅಗತ್ಯ ನೆರವು ನೀಡುತ್ತಿದ್ದಾರೆ.
ಮೊದಲನೇ ಹಂತದಲ್ಲಿ ರಾಜ್ಯ-ರಾಷ್ಟ್ರಮಟ್ಟದ ಅನೇಕ ಸಾಧಕರ ಪರಿಚಯದ ಹಸ್ತ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ನೀಡಿದ್ದಾರೆ. ಸಾಧಕರ ಪುಸ್ತಕಗಳಲ್ಲಿರುವ ಯಶೋಗಾಥೆ ಮಕ್ಕಳಲ್ಲಿ ಓದುವ ಸದಾಭಿರುಚಿಯನ್ನು ಮೂಡಿಸಲು ಸ್ಫೂರ್ತಿ ಆಗುವಂತಿವೆ. ಪುಸ್ತಕಗಳ ಆಯ್ಕೆ ಅತ್ಯಂತ ಪ್ರಶಂಸನೀಯವಾಗಿದೆ. ತರಗತಿ ಬೋಧನೆಯಲ್ಲಿ ಅತ್ಯಂತ ಪರಿಣಾಮಕಾರಿ ಆಗುವ ಮತ್ತು ಮಕ್ಕಳ ಅಭ್ಯಾಸಕ್ಕೆ ಪೂರಕವಾಗುವಂತಹ ಅಟ್ಲಾಸ್ ಪುಸ್ತಕಗಳು ಮತ್ತು ಇಂಗ್ಲಿಷ್ ಸ್ಟ್ಯಾಂಡರ್ಡ್ ಡಿಕ್ಷನರಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಇನ್ನೊಂದು ಮಹತ್ವಕಾಂಕ್ಷೆ ಯೋಜನೆಯಾದ ಸರ್ಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಸಾಕ್ಷರತೆ ಅಗತ್ಯತೆಯನ್ನು ಮನಗಂಡ ಈ ಸಂಘ, ಒಬ್ಬ ಕಂಪ್ಯೂಟರ್ ಶಿಕ್ಷಕರನ್ನು ನೇಮಿಸಿ ಅವರಿಗೆ ಪ್ರತಿ ತಿಂಗಳು ಗೌರವ ಸಂಭಾವನೆಯನ್ನು ನೀಡುವ ವ್ಯವಸ್ಥೆ ಮಾಡಿದ್ದಾರೆ. ಪ್ರತಿ ತಿಂಗಳು ಒಬ್ಬೊಬ್ಬರು ಗೌರವಧನ ವಿತರಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಜೊತೆಗೆ ಗ್ರಾಮದ ಮೂರು ಪ್ರಾಥಮಿಕ ಶಾಲೆಗಳಿಗೆ ಗ್ರಂಥಾಲಯದ ಪುಸ್ತಕಗಳನ್ನು ನೀಡಿದ್ದಾರೆ.
ಇಂತಹದ್ದೊಂದು ಹೊಸ ಪ್ರಯತ್ನಕ್ಕೆ ಹಳೇ ವಿದ್ಯಾರ್ಥಿಗಳ ಸಂಘ ಮುಂದಡಿ ಇಡುವ ಮೂಲಕ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳ ಜ್ಞಾನಾರ್ಜನೆಗೆ ದಿಟ್ಟ ಹೆಜ್ಜೆ ಇಟ್ಟಿರುವುದು ಮಾದರಿ ನಡೆ ಆಗಿದೆ. ಸಂಘದ ಈ ಕಾರ್ಯಕ್ಕೆ ಊರಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.