ಮಡಿವಾಳರನ್ನು ಎಸ್ಸಿ ಮೀಸಲಾತಿಗೆ ಸೇರಿಸುವ ಬಗ್ಗೆ ಸಿದ್ದರಾಮಯ್ಯ ಯಾವ ಭರವಸೆ ನೀಡಿದರು..?
ತುಮಕೂರು: ಇಂದು ಜಿಲ್ಲೆಯಲ್ಲಿ ಮಡಿವಾಳರ ಬೃಹತ್ ಸಮಾವೇಶ ನಡೆದಿದೆ. ಈ ಸಮಾವೇಶದಲ್ಲಿ ಕಾಂಗ್ರೆಸ್ ನ ಹಲವು ಗಣ್ಯರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಮಡಿವಾಳರನ್ನು ಎಸ್ಸಿ ಸಮುದಾಯಕ್ಕೆ ಸೇರಿಸುವ ಭರವಸೆ ನೀಡಿದ್ದಾರೆ. ಅದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮಾತ್ರ.
ಮಡಿವಾಳ ಸಮುದಾಯವನ್ನು ಎಸ್ಸಿ ಮೀಸಲಾತಿಗೆ ಸೇರಿಸಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ಕೇಂದ್ರಕ್ಕೆ ಅನ್ನಪೂರ್ಣ ವರದಿ ಮೂಲಕ ಶಿಫಾರಸು ಮಾಡಬೇಕಿದೆ. ನಮ್ಮ ಸರ್ಕಾರ ಬಂದಾಗ ವರದಿ ಶಿಫಾರಸಿಗೆ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಲಾಗುತ್ತದೆ. ಮಡಿವಾಳ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಬೇಕೆಂದು ಒತ್ತಾಯ ಮಾಡಿದ್ದಾರೆ. ಪರಿಷತ್ ನಲ್ಲಿ ಅವಕಾಶ ಕಲ್ಪಿಸಲು ಪ್ರಯತ್ನಿಸುತ್ತೇವೆ.
ಎಲ್ಲಾ ಚುನಾವಣೆಗಳಲ್ಲೂ ಎಲ್ಲಾ ಜಾತಿಯವರಿಗೆ ಮೀಸಲಾತಿ ಬೇಕು. ಮೀಸಲಾತಿ ಇಲ್ಲ ಎಂದರೆ ರಾಜಕೀಯ ಸ್ಥಾನಮಾನ ಸಿಗುವುದಿಲ್ಲ. ರಾಜಕೀಯ ಮೀಸಲಾತಿ ಇರಲೇಬೇಕು. ಅದರಲ್ಲಿ ಯಾವುದೇ ರಾಜಿ ಇಲ್ಲ. ಮಡಿವಾಳ ಸಮಾಜ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಆದರೂ ಇಂದು ಇಷ್ಟು ದೊಡ್ಡ ಸಮಾವೇಶ ಏರ್ಪಡಿಸಿರುವುದು ಸಾಹಸವೇ ಸರಿ. ಸಾಮಾಜಿಕ ಹಿಂದುಳಿದ ಜಾತಿಗಳನ್ನು ಗುರುತಿಸಿ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದಿದ್ದಾರೆ.