ಬಿಸಿಎಂ ಹಾಸ್ಟೆಲ್ ಗಳಿಗೆ ಮಠದಿಂದ ಅಕ್ಕಿ ಸಾಲ ಪಡೆದ ವಿಚಾರ: ಎಚ್ಚೆತ್ತ ಸರ್ಕಾರ ಮಾಡಿದ್ದೇನು..?
ತುಮಕೂರು: ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಿಗೆ ಕೋಟಿ ಕೋಟಿ ಹಣ ಹೋಗುತ್ತಿದೆ. ಈ ಖರ್ಚಿನ ವಿಚಾರವಾಗಿ ಈಗಾಗಲೇ ಸಾಕಷ್ಟು ವಿರೋಧಗಳು ಕೇಳಿ ಬಂದಿದೆ. ಇದೀಗ ಗ್ಯಾರಂಟಿ ಯೋಜನೆಗಳಿಂದಾಗಿ ಬಿಸಿಎಂ ಹಾಸ್ಟೇಲ್ ಗಳಿಗೆ ಅಕ್ಕಿ ಒದಗಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಹಾಸ್ಟೆಲ್ ಗೆ ಸಿದ್ದಗಂಗಾ ಮಠದಿಂದ ಅಕ್ಕಿಯನ್ನು ಸಾಲವಾಗಿ ನೀಡಲಾಗಿದೆ ಎನ್ನಲಾಗಿದ್ದು, ಈ ಸುದ್ದಿ ಸಾಕಷ್ಟು ವೈರಲ್ ಆಗಿದೆ.
ಸುದ್ದಿ ಹಬ್ಬುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಕ್ರಮ ತೆಗೆದುಕೊಂಡಿದೆ. ಇದರಿಂದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯ ತಲೆದಂಡವಾಗಿದೆ. ತುಮಕೂರು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗೀತಮ್ಮ ಅವರನ್ನು ಅಮಾನತು ಮಾಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರಾದ ಕೆ ಎ ದಯಾನಂದ ಅವರು ಅಮಾನಗು ಮಾಡಿ, ಆದೇಶ ಹೊರಡಿಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬಿಸಿಎಂ ಹಾಸ್ಟೆಲ್ ಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಸರಿಯಾದ ಸಮಯಕ್ಕೇನೆ ಅಕ್ಕಿ ವಿತರಣೆಯಾಗಿದೆ. ಆದರೂ ಹಾಸ್ಟೇಲ್ ಗಳಿಗೆ ಅಕ್ಕಿಯನ್ನು ಎತ್ತುವಳಿ ಮಾಡಲು ಹಿಂದೇಟು ಹಾಕಲಾಗಿದೆ. ಹೀಗಾಗಿ ಗೀತಮ್ಮ ಅವರನ್ನು ಕರ್ತವ್ಯ ಲೋಪದಡಿ ಅಮಾನತು ಮಾಡಲಾಗಿದೆ. ಚುನಾವಣೆ ಹತ್ತಿರವಿರುವಾಗಲೇ ಇಂತಹ ಎಡವಟ್ಟುಗಳು ರಾಜ್ಯ ಸರ್ಕಾರಕ್ಕೆ ಸಾಕಷ್ಟು ತಲೆದಂಡವಾಗುತ್ತಿತ್ತು. ವಿರೋಧ ಪಕ್ಷಗಳಿಗೆ ಚರ್ಚಿತ ವಿಚಾರವಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಬೇಗನೆ ಎಚ್ಚೆತ್ತುಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದೆ.