ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳಿಗೆ ಮುಕ್ತಿ : ಸಿದ್ಧಗಂಗಾ ಶ್ರೀ ಏನಂದ್ರು..?
ತುಮಕೂರು: ರಾಜ್ಯ ಸರ್ಕಾರ ಇದೀಗ ದೇವಸ್ಥಾನಗಳನ್ನ ಮುಜರಾಯಿ ಇಲಾಖೆಗಳಿಂದ ಹೊರ ತಂದು ಸ್ವಾತಂತ್ರ್ಯ ನೀಡಲು ಮುಂದಾಗಿದೆ. ಈ ಸಂಬಂಧ ಸಿದ್ದಗಂಗಾ ಶ್ರೀಗಳು ಮಾತನಾಡಿದ್ದು, ದೇವಸ್ಥಾನ ಒಬ್ಬರಿಗೆ ಸೇರಿದ್ದಂತಲ್ಲ. ಕಾನೂನು ಎಲ್ಲರಿಗೂ ಒಂದೇ ರೀತಿ ಇರಬೇಕು ಎಂದಿದ್ದಾರೆ.
ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಿಗೊಳಿಸುವುದು ಸಂತಸದ ವಿಚಾರ. ಹೆಚ್ಚಿಗೆ ಬರುವ ಆದಾಯವನ್ನ ಸರ್ಕಾರ ಒಳ್ಳೆಯ ಯೋಜನೆಗಳಿಗೆ ಬಳಸಿಕೊಳ್ಳಲಿ. ದೇವಸ್ಥಾನದ ಆದಾಯದಿಂದ ದೇವಸ್ಥಾನದ ಮೂಲಭೂತ ಸೌಕರ್ಯ ಹೆಚ್ಚಲಿ. ಯಾಕಂದ್ರೆ ದೇವಸ್ಥಾನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಜನ ಬಂದು ಸೇವೆ ಸಲ್ಲಿಸುತ್ತಾರೆ.
ದೇವಾಲಯಗಳಲ್ಲಿ ಅರ್ಚಕರು ಸೇವೆ ಸಲ್ಲಿಸುತ್ತಾರೆ. ಅವರ ಜೀವನಕ್ಕೂ ಭದ್ರತೆ ಸಿಗಲಿ. ಅದನ್ನು ಮೀರಿದ ಆದಾಯವನ್ನ ಬೇಕಾದರೆ ಸರ್ಕಾರ ಬಳಸಿಕೊಳ್ಳಲಿ. ನೀರಾವರಿ ಯೋಜನೆ, ಬಡತನ ನಿರ್ಮೂಲನೆಯಂತಹ ಕಾರ್ಯಗಳಿಗೆ ಬೇಕಾದರೆ ದೇವಾಲಯದ ಹಣ ಬಳಕೆಯಾಗಲಿ. ಕಾನೂನು ಎಂದ ಮೇಲೆ ದೇಶದ ಪ್ರತಿಯೊಬ್ಬ ಪ್ರಜೆಗೂ ಅನ್ವಯಿಸುವಂತಿರಬೇಕು. ಮಠಗಳು ತಮ್ಮದೆ ಆದಂತಹ ಅಸ್ತಿತ್ವ ಹೊಂದಿವೆ ಎಂದು ಸಿದ್ದಗಂಗಾ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.