ಉಪೇಂದ್ರ ಅವರ ಗಾದೆ ಮಾತಿಗೆ ಗೃಹ ಸಚಿವ ಪರಮೇಶ್ವರ್ ಗರಂ..!
ತುಮಕೂರು: ಫೇಸ್ ಬುಕ್ ಲೈವ್ ಬಂದಾಗ ನಟ ಉಪೇಂದ್ರ ಅವರು ಗಾದೆ ಮಾತೊಂದನ್ನು ಹೇಳುವ ಮೂಲಕ ಒಂದು ಸಮುದಾಯಕ್ಕೆ ಅವಹೇಳನವಾಗುವಂತೆ ಮಾತನಾಡಿದ್ದರು. ಬಳಿಕ ಇದರ ವಿರುದ್ಧ ಹಲವು ಸಂಘಟನೆಗಳು ರೊಚ್ಚಿಗೆದ್ದು ಪ್ರತಿಭಟನೆ ಕೂಡ ನಡೆಸಿದ್ದರು. ಹೈಕೋರ್ಟ್ ನಿಂದ ಉಪೇಂದ್ರ ಅವರಿಗೆ ರಿಲೀಫ್ ಸಿಕ್ಕ ಮೇಲೆ, ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಈ ವಿಚಾರವಾಗಿ ಇಂದು ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿ, ಆಕ್ರೋಶ ಹೊರ ಹಾಕಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಯಾರು ಕೂಡ ಒಂದು ಸಮುದಾಯದ ಬಗ್ಗೆ ಮಾತನಾಡಬಾರದು. ಗಾದೆ ಮಾತು ಇದೆ ಅಂತ ಯಾರೂ ಮಾತನಾಡಬಾರದು. ಸಚಿವರೇ ಆಗಲಿ, ಯಾರೇ ಆಗಲಿ ಈ ರೀತಿ ಮಾತನಾಡುವುದು ಸರಿ ಅಲ್ಲ. ಒಂದು ಸಮುದಾಯದ ಬಗ್ಗೆ ಇಷ್ಟು ಕೀಳಾಗಿ ಮಾತಾಡುವ ಸಂಸ್ಕೃತಿ ನಿಲ್ಲಿಸಬೇಕು.
ಈಗಿನ ಆಧುನಿಕ ಜಗತ್ತಿನಲ್ಲಿ ಆ ನಾಣ್ನೂಡಿ ಸರಿಯಾಗಿಲ್ಲ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಯಾಕೆ ಆ ರೀತಿ ಮಾತನಾಡಬೇಕು. ಆ ಸಮುದಾಯದವರ ನೋವಾಗುವ ರೀತಿ ಮಾತನಾಡಬಾರದು. ಸಿಎಂ ಜೊತೆಗೆ ಮಾತನಾಡ್ತೀನಿ. ಉಪೇಂದ್ರ, ಎಸ್ ಎಸ್ ಮಲ್ಲಿಕಾರ್ಜುನ ಅವರ ಬಗ್ಗೆ ಚರ್ಚೆ ಮಾಡ್ತೇನೆ. ಇಬ್ಬರ ಹೇಳಿಕೆ ಬಗ್ಗೆ ಸಿಎಂ ಬಳಿ ಚರ್ಚೆ ನಡೆಸುತ್ತೇನೆ. ಇದೊಂದು ನಾನ್ಸೆನ್ಸ್ ಹೇಳಿಕೆ. ಸಾಮಾಜಿಕ ಜೀವನದಲ್ಲಿ ಇದ್ದು ಇಷ್ಟು ಕೀಳಾಗಿ ಮಾತನಾಡಬಾರದು. ಎರಡು ಪ್ರಕರಣದಲ್ಲೂ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.