ಸಿದ್ದರಾಮಯ್ಯ ಕುಟುಂಬದ ವಿರುದ್ದ ಅವಹೇಳನ ಹೇಳಿಕೆ ನೀಡಿ ಜೈಲು ಸೇರಿದ್ದ ಶಕುಂತಲಾ ವಿರುದ್ಧ ಮತ್ತೊಂದು ಕೇಸ್..!
ತುಮಕೂರು: ಡಿಕೆ ಶಿವಕುಮಾರ್ ಒಡೆತನದ ಲುಲು ಮಾಲ್ ಬಗ್ಗೆ ಫೇಕ್ ಪೋಸ್ಟ್ ಹಂಚಿಕೊಂಡಿದ್ದ ಬಿಜೆಪಿ ಮಹಿಳಾ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಲಾಗಿದೆ. ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಶಕುಂತಲಾ ನಟರಾಜ್ ತಮ್ಮ ಎಕ್ಸ್ ಖಾತೆಯಲ್ಲಿ ಲುಲು ಮಾಲ್ ಬಗೆಗೊಂದು ಫೋಟೋ ಹಂಚಿಕೊಂಡಿದ್ದರು. ಬಾವುಟಗಳು ಇರುವಂತ ಪೋಸ್ಟ್ ಅದಾಗಿತ್ತು. ಫೋಟೋ ಹಾಕಿ, ಲುಲು ಶಾಪಿಂಗ್ ಮಾಲ್ ನಲ್ಲಿ ಭಾರತ ಭಾವುಟಕ್ಕಿಂತ ಎತ್ತರದಲ್ಲಿ ಪಾಕ್ ಬಾವುಟವನ್ನು ಹಾರಿಸಲಾಗಿದೆ ಎಂದು ಫೋಟೋ ಸಮೇತ ಹಾಕಿದ್ದರು. ಅದಷ್ಟೇ ಅಲ್ಲ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ, ಭಾರತ ಬಾವುಟಕ್ಕಿಂತ ಬೇರೆ ಯಾವುದೇ ಬಾವುಟ ಎತ್ತರದಲ್ಲಿ ಇರಬಾರದು ಎಂಬ ಸಾಮಾನ್ಯ ಪ್ರಜ್ಞೆ ನಿಮ್ಮ ಮಾಲ್ ನವರಿಗೆ ಇಲ್ಲವೇ..? ಎಂದು ಡಿಕೆಶಿ ಅವರಿಗೆ ಕೇಳಿದ್ದರು.
ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಫ್ಯಾಕ್ಟ್ ಚೆಕ್ ಮಾಡಿದ್ದಾರೆ. ಈ ಫೋಟೋವನ್ನು ಎಡಿಟ್ ಮಾಡಿರುವುದು ಬೆಳಕಿಗೆ ಬಂದಿದೆ. ಎಡಿಟ್ ಮಾಡಿರುವಂತ ಫೋಟೋವನ್ನೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಈ ಸಂಬಂಧ ಶಕುಂತಲಾ ನಟರಾಜ್ ವಿರುದ್ಧ ಕೇಸ್ ದಾಖಲಾಗಿದೆ. ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದಾರೆಂಬ ಆರೋಪದ ಮೇಲೆ ಸುಮೋಟೋ ಕೇಸ್ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 153 (ಬಿ) ಅಡಿಯಲ್ಲಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಶಕುಂತಲ ನಟರಾಜ್ ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದರು. ಆ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ಬಂಧಿಸಿದ್ದರು. ಇದೀಗ ಡಿಕೆಶಿ ಒಡೆತನದ ಲುಲು ಮಾಲ್ ಬಗ್ಗೆ ಮಾತನಾಡಿದ್ದಾರೆ.