ತುಮಕೂರು ಜನತೆಗೆ ಹೊಸ ಭರವಸೆ : ವಿ ಸೋಮಣ್ಣ ಗೆದ್ದರೆ 10 ಸಾವಿರ ಕೋಟಿ ತರ್ತಾರಂತೆ..!
ತುಮಕೂರು: ಬಿರು ಬೇಸಿಗೆಯ ನಡುವೆ ಲೋಕಸಭಾ ಚುನಾವಣೆಯ ಬಿಸಿಯೂ ಕಾವೇರಿದೆ. ಅಭ್ಯರ್ಥಿಗಳಿಂದ ಜನತೆಗೆ ಈಗ ಹೊಸ ಹೊಸ ಭರವಸೆಗಳು ಸಿಗುತ್ತಿವೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ವಿ ಸೋಮಣ್ಣ ಕಣಕ್ಕೆ ಇಳಿದಿದ್ದಾರೆ. ಪ್ರಚಾರದ ನಡುವೆ ತುಮಕೂರು ಜನತೆಗೆ ಹೊಸ ಭರವಸೆ ನೀಡಿದ್ದಾರೆ.
'ನಾನು ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ 100 ದಿನಗಳ ಒಳಗೆ ಕೇಂದ್ರದಿಂದ ಕಲ್ಪತರು ನಾಡಿಗೆ 10 ಸಾವಿರ ಕೋಟಿ ರೂಪಾಯಿ ಅನುದಾನ ತರುತ್ತೇನೆ. ರಾಯದುರ್ಗ ರೈಲ್ವೆ ಕಾಮಗಾರಿ ಮತ್ತು ಎತ್ತಿನಹೊಳೆ ನೀರಾವರಿ ಯೋಜನೆಗೆ ಮರುಚಾಲನೆ ನೀಡುತ್ತೇನೆ. ಕೇಂದ್ರ ಸರ್ಕಾರದಿಂದ ಕೊರಟಗೆರೆ ಕ್ಷೇತ್ರಕ್ಕೆ ಹೈಟೆಕ್ ಆಸ್ಪತ್ರೆ ತಂದೇ ತರುತ್ತೇನೆ. ಇದು ಕೇವಲ ಭರವಸೆಯಲ್ಲ, ಬಡ ಜನರ ನೋವಿನ ಮನವಿ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಿದ್ದೇವೆ. ಸಿದ್ದರಬೆಟ್ಟ ಮತ್ತು ಏಳು ಸುತ್ತಿನ ಕೋಟೆಯನ್ನು ಪ್ರವಾಸಿ ತಾಣವಾಗಿ ಮಾಡುತ್ತೇವೆ ಎಂದು ವಿ ಸೋಮಣ್ಣ ಭರವಸೆ ನೀಡಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಧುಸ್ವಾಮಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಹೈಕಮಾಂಡ್ ವಿ ಸೋಮಣ್ಣ ಅವರಿಗೆ ಮಣೆ ಹಾಕಿದೆ. ವಿ ಸೋಮಣ್ಣ ಕೆಲ ಬೇಸರದಿಂದ ಪಕ್ಷ ಬಿಡುವ ಮುನ್ಸೂಚನೆ ನೀಡಿದ್ದರು. ಅವರ ಅಸಮಾಧಾನ ಶಮನ ಮಾಡಿದ ಹೈಕಮಾಂಡ್ ಟಿಕೆಟ್ ನೀಡಿದೆ. ಇನ್ನು ಟಿಕೆಟ್ ಅನೌನ್ಸ್ ಆಗುವುದಕ್ಕೂ ಮೊದಲೇ ವಿ ಸೋಮಣ್ಣ ತುಮಕೂರು ಕ್ಷೇತ್ರದಲ್ಲಿ ವಿ ಸೋಮಣ್ಣ ಆಕ್ಟೀವ್ ಆಗಿದ್ದರು. ಜನರ ಬಳಿ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಇದೀಗ ಟಿಕೆಟ್ ಸಿಕ್ಕಿದ್ದು, ಭರವಸೆ ನೀಡುತ್ತಾ, ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.