ಅಂಗಾಂಗ ದಾನ ಮಾಡಿದ ತುಮಕೂರಿನ 12 ವರ್ಷದ ಬಾಲಕಿ : ಮೃತದೇಹದ ಮೆರವಣಿಗೆಯಲ್ಲಿ ನೂರಾರು ಜನ ಭಾಗಿ..!
ತುಮಕೂರು: 12 ವರ್ಷದ ಬಾಲಕಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ಸಾವು ಬದುಕಿನ ನಡುವೆ ಹೋರಾಡಿ, ಪ್ರಾಣಬಿಟ್ಟ ಈ ಪುಟ್ಟ ಬಾಲಕಿ ಅಂಗಾಂದ ದಾನದಿಂದ ಆರು ಜನರಿಗೆ ಬೆಳಕಾಗಿದ್ದಾಳೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಂದನಾ, ಆಸ್ಪತ್ರೆಗೆ ದಾಖಲಾಗಿದ್ದಳು. ಸತತ ಏಳು ದಿನಗಳ ಕಾಲ ಚಿಕಿತ್ಸೆ ನೀಡಿದರು ಯಾವುದೇ ಪ್ರಯೋಜನವಾಗಲಿಲ್ಲ. ಕಡೆಗೆ ಇಹಲೋಕ ತ್ಯಜಿಸಿದಳು. ಆದರೆ ಸಾವಿನಲ್ಲೂ ಮತ್ತಷ್ಟು ಜನಕ್ಕೆ ಬೆಳಕಾಗಿದ್ದು ಮಾತ್ರ ಶ್ಲಾಘನೀಯ ಸಂಗತಿಯಾಗಿದೆ.
ಈ ಪುಟ್ಟ ಬಾಲಕಿಯ ಕೆಲಸಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಕೆಯ ಕಡೆಯ ಪಯಣದಲ್ಲಿ ನೂರಾರು ಜನ ಜೊತೆಯಾಗಿದ್ದಾರೆ. ಇಂದು ಚಂದನಾ ಅವರ ಅಂತ್ಯಕ್ರಿಯೆ. ಹೀಗಾಗಿ ಆಕೆಯ ಹುಟ್ಟೂರು ತುಮಕೂರು ಜಿಲ್ಲೆಯ ತಿಪಟೂರಿಗೆ ಇಂದು ಮೃತದೇಹ ತಲುಪಿದೆ. ಚಂದನಾ ಮೃತದೇಹವನ್ನು ಮೆರವಣಿಗೆ ಮಾಡುವುದರ ಮೂಲಕ ಕೊಂಡೊಯ್ಯಲಾಗಿದೆ. ಈ ಮೆರವಣಿಗೆಯಲ್ಲಿ ನೂರಾರು ಜನ ಭಾಗಿಯಾಗಿ, ಚಂದನಾ ಆತ್ಮಕ್ಕೆ ಶಾಂತಿಕೋರಿದ್ದಾರೆ.
ಚಂದನಾಳ ಮೃತದೇಹ ಕಂಡು ಶಿಕಗಷಕರು ಮತ್ತು ಸಹಪಾಠಿಗಳಿಗೆ ದುಃಖ ತಡೆಯಲಾಗಿಲ್ಲ. ಚಂದನಾ ತಿಪಟೂರಿನ ಶ್ರೀವಿವೆಕಾನಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಸ್ಕೂಲ್ ಮುಗಿಸಿ ವಾಪಾಸ್ ಮನೆಗೆ ಬರುವಾಗ ಜುಲೈ 23ರಂದು ರಸ್ತೆ ಅಪಘಾತವಾಗಿತ್ತು. ಅಪಘಾತದ ರಭಸಕ್ಕೆ ತಲೆಗೆ ಜೋರು ಪೆಟ್ಟು ಬಿದ್ದಿತ್ತು. ಲಾರಿ ಡಿಕ್ಕಿ ಹೊಡೆದು ಮೆದುಳು ನಿಷ್ಕ್ರಿಯವಾಗಿತ್ತು. ಅಪಘಾತದ ಬಳಿಕ ಹಾಸನ ಮೆಡಿಕಲ್ ಕಾಲೇಜಿನಲ್ಲಿ ಚಂದನಾಗೆ ಚಿಕಿತ್ಸೆ ನೀಡಲಾಗಿತ್ತು. ಸಾವು ಬದುಕಿನ ನಡುವೆ ಆರು ದಿನಗಳ ಕಾಲ ಹೋರಾಟ ಮಾಡಿ, ಇನ್ನು ಆಗಲ್ಲ ಅಂತ ಹೊರಟೇ ಬಿಟ್ಟಿದ್ದಾಳೆ. ಬಾರದ ಲೋಕಕ್ಕೆ ಹೊರಡುವುದಕ್ಕೂ ಮುನ್ನ ಆರು ಜನಕ್ಕೆ ಜೀವದಾನ ಮಾಡಿ ಹೋಗಿದ್ದಾಳೆ. ಇಷ್ಟು ಪುಟ್ಟ ಬಾಲಕಿ ಅಂಗಾಂಗ ದಾನ ಮಾಡುವ ಕಾರ್ಯಕ್ಕೆ ಎಲ್ಲರಿಂದಾನೂ ಮೆಚ್ಚುಗೆ ವ್ಯಕ್ತವಾಗಿದೆ.