ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಡಕ್ ಔಟ್ ಆದ ವಿರಾಟ್ ಕೊಹ್ಲಿ : ಅಭಿಮಾನಿಗಳಿಗೆ ತೀವ್ರ ನಿರಾಸೆ
ಸುದ್ದಿಒನ್ : ಏಕದಿನ ವಿಶ್ವಕಪ್‌ನಲ್ಲಿ ಇಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸೆಣಸುತ್ತಿದೆ. ಇಂಗ್ಲೆಂಡ್ ಬೌಲರ್ ಗಳ ದಾಳಿಗೆ ಭಾರತ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 40 ರನ್‌ಗಳಿಗೆ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿರುವ ಟೀಂ ಇಂಡಿಯಾ ರನ್‌ಗಾಗಿ ಪರದಾಡುತ್ತಿದೆ.
ಈ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಟೀಂ ಇಂಡಿಯಾ ಬ್ಯಾಟಿಂಗ್ ಆರಂಭಿಸಿದೆ.
ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಮೇಡನ್ ಬೌಲ್ ಮಾಡಿದ ಡೇವಿಡ್ ವಿಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾದರು. ಆದರೆ ನಾಲ್ಕನೇ ಓವರ್ ನಲ್ಲಿ ಟೀಂ ಇಂಡಿಯಾಗೆ ಮೊದಲ ಆಘಾತ ಕಾದಿತ್ತು. ಒಂಬತ್ತು ರನ್ ಗಳಿಸಿದ್ದ ಆರಂಭಿಕ ಆಟಗಾರ ಶುಭಮನ್ ಗಿಲ್ ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಟೀಂ ಇಂಡಿಯಾ 26 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು.
ಗಿಲ್ ನಿರ್ಗಮನದ ಬಳಿಕ ಭಾರೀ ನಿರೀಕ್ಷೆಯೊಂದಿಗೆ ಕ್ರೀಸ್ ಗೆ ಬಂದ ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಒನ್ ಡೌನ್ ನಲ್ಲಿ ಬಂದ ವಿರಾಟ್ ಒಂಬತ್ತು ಎಸೆತಗಳನ್ನು ಎದುರಿಸಿದ ಕೊಹ್ಲಿಗೆ ಶಕ್ತಿಯುತವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ, ಡೇವಿಡ್ ವಿಲ್ಲಿ ಬೌಲಿಂಗ್‌ನಲ್ಲಿ ಬೆನ್ ಸ್ಟೋಕ್ಸ್ ಗೆ ಕ್ಯಾಚ್ ನೀಡಿದರು. ಇದರಿಂದಾಗಿ ಭಾರತ ತಂಡ 27 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು.
ಈ ಪಂದ್ಯದಲ್ಲಿ ಡಕ್ ಔಟ್ ಆದ ಕಿಂಗ್ ಕೊಹ್ಲಿ ಏಕದಿನ ಮತ್ತು ಟಿ20 ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಶೂನ್ಯಕ್ಕೆ ಔಟಾದರು. ಏಕದಿನ ಮತ್ತು ಟಿ20 ವಿಶ್ವಕಪ್‌ನಲ್ಲಿ ಒಟ್ಟು 56 ಇನ್ನಿಂಗ್ಸ್‌ಗಳನ್ನು ಆಡಿರುವ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಡಕ್ ಔಟ್ ಆಗಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಸಚಿನ್ ಶತಕದ ದಾಖಲೆ ಮುರಿಯುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಕಿಂಗ್ ಕೊಹ್ಲಿ ಶೂನ್ಯಕ್ಕೆ ಪೆವಿಲಿಯನ್ ಸೇರಿದರು.
ವಿರಾಟ್ ಔಟಾದ ಬೆನ್ನಲ್ಲೇ ಇಂಗ್ಲೆಂಡ್ ಮತ್ತೊಂದು ಬಿಗ್ ಶಾಕ್ ನೀಡಿದೆ. ಕ್ರಿಸ್ ವೋಕ್ಸ್ ಬೌಲಿಂಗ್ ನಲ್ಲಿ ಶ್ರೇಯಸ್ ಅಯ್ಯರ್ ಮಾರ್ಕ್ ವುಡ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಶ್ರೇಯಸ್ ಅಯ್ಯರ್ 16 ಎಸೆತಗಳಲ್ಲಿ ನಾಲ್ಕು ರನ್ ಗಳಿಸಿ ಪೆವಿಲಿಯನ್ ತಲುಪಿದರು. ಇದರಿಂದಾಗಿ ಟೀಂ ಇಂಡಿಯಾ 40 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ಒಂದೆಡೆ ಒಂದರ ಮೇಲೊಂದು ವಿಕೆಟ್ ಹೋಗುತ್ತಿದ್ದರೆ ನಾಯಕ ರೋಹಿತ್ ಶರ್ಮಾ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.
ಮತ್ತೊಂದೆಡೆ, ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಮತ್ತು ಸೆಮಿಸ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ತವಕದಲ್ಲಿದೆ. ಮತ್ತೊಂದೆಡೆ, ಇಂಗ್ಲೆಂಡ್ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿದೆ. ಈ ಪಂದ್ಯ ಗೆಲ್ಲಬೇಕೆಂಬ ಹಠದೊಂದಿಗೆ ಆಟಗಾರರು ಆಟವಾಡುತ್ತಿದ್ದಾರೆ.