ಕ್ರಿಕೆಟ್ ಇತಿಹಾಸದಲ್ಲಿಯೇ ನೀವೆಂದೂ ನೋಡಿರದ ಅದ್ಭುತ ಕ್ಯಾಚ್ : ವಿಡಿಯೋ ನೋಡಿ...!
ಸುದ್ದಿಒನ್ ಸ್ಪೋರ್ಟ್ಸ್ ಡೆಸ್ಕ್
ಟಿ 20 ಫಾರ್ಮ್ಯಾಟ್ ಬಂದಾಗಿನಿಂದ ಕ್ರಿಕೆಟ್‌ನ ದಿಕ್ಕನ್ನೇ ಬದಲಿಸಿತು. ಅದರಲ್ಲೂ ಫೀಲ್ಡಿಂಗ್ ಗುಣಮಟ್ಟ ಸಾಕಷ್ಟು ಸುಧಾರಿಸಿದೆ. ಫೀಲ್ಡರ್‌ಗಳು ಬೌಂಡರಿ ಲೈನ್ ಗಳಲ್ಲಿ ಪವಾಡಗಳನ್ನು ಪ್ರದರ್ಶಿಸುತ್ತಿದ್ದಾರೆ. ಏಕೆಂದರೆ ಗೆಲುವಿಗೆ ಒಂದೇ ಒಂದು ರನ್ ಕೂಡ ನಿರ್ಣಾಯಕವಾಗಿರುತ್ತದೆ.
ಕಣ್ಮನ ಸೆಳೆಯುವ ರೀತಿಯಲ್ಲಿ ಕ್ಯಾಚ್ ಹಿಡಿಯುವುದು, ಕೊನೆಯ ಕ್ಷಣದಲ್ಲಿ ಬೌಂಡರಿ ಲೈನ್ ನಲ್ಲಿ ಬೌಂಡರಿ, ಸಿಕ್ಸರ್ ಗಳನ್ನು ತಡೆಯುವುದು ಐಪಿಎಲ್ ನಲ್ಲಿ ಹಲವು ಬಾರಿ ಕಂಡು ಬರುತ್ತಿದೆ.
ಆದರೆ, ಈ ರೀತಿಯ ಕ್ಯಾಚ್ ಹಿಂದೆಂದೂ ಕಂಡಿರಲಿಲ್ಲ. ಕ್ರಿಕೆಟ್ ಇತಿಹಾಸದಲ್ಲೇ ಅದ್ಬುತವಾದ ಕ್ಯಾಚ್ ಹಿಡಿದ ವಿಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸದ್ದು ಮಾಡುತ್ತಿದೆ. ಇಂಗ್ಲೆಂಡ್‌ನಲ್ಲಿ ಆರಂಭವಾದ ವಿಟಾಲಿಟಿ ಬ್ಲಾಸ್ಟ್ ಟಿ20 ಟೂರ್ನಿಯಲ್ಲಿ ಶುಕ್ರವಾರ (ಜೂನ್ 16) ಸಸೆಕ್ಸ್ ಮತ್ತು ಹ್ಯಾಂಪ್‌ಶೈರ್ ನಡುವೆ ಈ ಪವಾಡ ನಡೆದಿದೆ.
ಸಸೆಕ್ಸ್ ತಂಡದ ಆಟಗಾರ ಬ್ರಾಡ್ ಕ್ಯೂರಿ ಬೌಂಡರಿ ಗೆರೆಯಲ್ಲಿ ಹಿಡಿದ ಕ್ಯಾಚ್ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಮತ್ತೊಂದು ವಿಶೇಷವೆಂದರೆ ಕ್ಯೂರಿ ಅವರ ವೃತ್ತಿ ಜೀವನದಲ್ಲಿ ಇದು ಮೊದಲ ಟಿ20 ಪಂದ್ಯ. ಈ ಕ್ಯಾಚ್‌ನೊಂದಿಗೆ ರಾತ್ರೋರಾತ್ರಿ ಹೀರೋ ಆಗಿದ್ದಾರೆ. ಅಲ್ಲದೆ, ಈ ಪಂದ್ಯವನ್ನು ಸಸೆಕ್ಸ್ ತಂಡ 6 ರನ್‌ಗಳಿಂದ ಗೆದ್ದುಕೊಂಡಿದೆ.
ಅದೇನೆಂದರೆ.. ಸಿಕ್ಸರ್ ಹೋಗಬೇಕಿದ್ದ ಚೆಂಡನ್ನು ಕ್ಯೂರಿ ಕ್ಯಾಚ್ ಹಿಡಿದಾಗ ಅವರ ತಂಡಕ್ಕೆ ಎಷ್ಟು ಪ್ರಯೋಜನವಾಯಿತೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಕ್ಯೂರಿ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದರು. ಟೈಮಲ್ ಮಿಲ್ಸ್ ಅವರು ಎಸೆದ ಚೆಂಡನ್ನು ಹಾವೆಲ್ಸ್ ಬೌಂಡರಿ ಕಡೆಗೆ ಬಾರಿಸಿದರು. ಆ ಚೆಂಡನ್ನು ಕ್ಯೂರಿ ತುಂಬಾ ದೂರದಿಂದ ಓಡಿ ಬಂದು ಅದ್ಭುತವಾಗಿ ಡೈವ್ ಮಾಡಿ ಒಂದು ಕೈಯಿಂದ ಕ್ಯಾಚ್ ಹಿಡಿದಿದ್ದಾರೆ. ಎತ್ತರಕ್ಕೆ ಹಾರಿ ಅವರು ಹಿಡಿದ ಕ್ಯಾಚ್ ನೋಡಿ ಪ್ರೇಕ್ಷಕರು ಮತ್ತು ಆಟಗಾರರು ಮೂಕವಿಸ್ಮಿತರಾದರು. ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಿಕಿ ಪಾಂಟಿಂಗ್ ಕೂಡ ಕ್ಯೂರಿ ಬಗ್ಗೆ ಪ್ರಶಂಸೆಯ ಸುರಿಮಳೆಗೈದರು.
ಕ್ಯಾಚ್ ಅನ್ನು ಹಿಡಿದ ವಿಡಿಯೋವನ್ನು ವಿಟಾಲಿಟಿ ಬ್ಲಾಸ್ಟ್‌ನ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.
ಅವರು ಅದಕ್ಕೆ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತ್ಯುತ್ತಮ ಕ್ಯಾಚ್ ಎಂದು ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಪ್ರತಿಕ್ರಿಯಿಸಿದ್ದಾರೆ. ಇದು ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠ ಕ್ಯಾಚ್’ ಎಂದು ಹೇಳಿಕೊಂಡಿದ್ದಾರೆ. ಈ ಕ್ಯಾಚ್ ಬಗ್ಗೆ ಹಲವು ಕ್ರಿಕೆಟಿಗರು ಮತ್ತು ಸೆಲೆಬ್ರಿಟಿಗಳು ಟ್ವಿಟ್ಟರ್ ನಲ್ಲಿ ಕಾಮೆಂಟ್ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.