T20 3 ನೇ ಪಂದ್ಯ : ಸೋಲಿನ ಸುಳಿಯಲ್ಲಿದ್ದ ತಂಡವನ್ನು ಗೆಲುವಿನ ದಡ ಸೇರಿಸಿದ ಮ್ಯಾಕ್ಸ್‌ವೆಲ್ : ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಗೆಲುವು
ಸುದ್ದಿಒನ್ : ಭಾರತದಲ್ಲಿ ನಡೆಯುತ್ತಿರುವ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಜಯ ದಾಖಲಿಸಿದೆ. ಬೃಹತ್ ಸ್ಕೋರ್ ದಾಖಲಾದ ಈ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಆಸೀಸ್ ಗೆಲುವು ಸಾಧಿಸಿತು.
ಭಾರತ ನೀಡಿದ 223 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ ನಿಖರವಾಗಿ 20 ಓವರ್‌ಗಳಲ್ಲಿ ಮುಟ್ಟಿತು. ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ 48 ಎಸೆತಗಳಲ್ಲಿ 104 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಪಂದ್ಯದ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಜಯ ದಾಖಲಿಸಿದೆ. ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಭಾರತ 2-1 ಮುನ್ನಡೆಯಲ್ಲಿ ಮುಂದುವರಿದಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತ ನಿಗಧಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು. ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅಜೇಯ ಶತಕ ಸಿಡಿಸಿದರು. ಅವರು 57 ಎಸೆತಗಳಲ್ಲಿ ಒಟ್ಟು 123 ರನ್ ಗಳಿಸಿದರು. ರುತುರಾಜ್ ಗಾಯಕ್ವಾಡ್ ಅವರೊಂದಿಗೆ ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 39 ಮತ್ತು ತಿಲಕ್ ವರ್ಮಾ 24 ಎಸೆತಗಳಲ್ಲಿ 31 ರನ್ ಗಳಿಸಿದರು. ಭಾರತ ನಿಗಧಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 222 ರನ್‌ಗಳ ಬೃಹತ್ ಸ್ಕೋರ್ ಮಾಡಿತು.
ಬಳಿಕ ಬೃಹತ್ ಗುರಿಯೊಂದಿಗೆ ಕಣಕ್ಕೆ ಇಳಿದ ಆಸ್ಟ್ರೇಲಿಯಾ ಆರಂಭದಿಂದಲೇ ಪ್ರತಿದಾಳಿ ನಡೆಸಿತು. ಟ್ರಾವಿಸ್ ಹೆಡ್ 18 ಎಸೆತಗಳಲ್ಲಿ 35 ರನ್ ಗಳಿಸಿ ಆಕ್ರಮಣಕಾರಿ ಆಟವಾಡಿದರು. ಆ ಬಳಿಕ ಆಸೀಸ್ ಅಲ್ಪಾವಧಿಯಲ್ಲಿ ಹಾರ್ಡಿ (16) ಹಾಗೂ ಜೋಶ್ ಇಂಗ್ಲಿಸ್ (10) ವಿಕೆಟ್ ಕಳೆದುಕೊಂಡು 68 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ವಿಧ್ವಂಸಕ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ ಉತ್ತಮ ಪ್ರದರ್ಶನ ನೀಡಿದರು. ವಿಕೆಟ್‌ಗಳ ಪತನವಾದರೂ ರನ್ ಗಳಿಕೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡರು. ಅವರಿಗೆ ಮ್ಯಾಥ್ಯೂ ವೇಡ್ (16 ಎಸೆತಗಳಲ್ಲಿ 28) ನೆರವಾದರು.
ಕೊನೆಯ ಎರಡು ಓವರ್‌ಗಳಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 43 ರನ್‌ಗಳ ಅಗತ್ಯವಿದ್ದಾಗ ಭಾರತ ಸುಲಭವಾಗಿ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ 19ನೇ ಓವರ್ ನಲ್ಲಿ ಅಕ್ಷರ್ ಪಟೇಲ್ 22 ರನ್ ನೀಡಿದರು. ಕೊನೆಗೆ 6 ಎಸೆತಗಳಲ್ಲಿ 21 ಬೇಕಾಯಿತು. 20 ನೇ ಓವರ್ ನಲ್ಲಿ ವೇಡ್ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು ಮತ್ತು ಎರಡನೇ ಎಸೆತದಲ್ಲಿ ಸಿಂಗಲ್ ಪಡೆದರು. ನಂತರ ಮ್ಯಾಕ್ಸ್ ವೆಲ್ 6, 4, 4, 4 ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಅವರು 48 ಎಸೆತಗಳಲ್ಲಿ 104 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಪಂದ್ಯದ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತನ್ನ ಸರಣಿ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಸದ್ಯ ಭಾರತ 3 ಪಂದ್ಯಗಳಲ್ಲಿ 2-1 ಮುನ್ನಡೆಯಲ್ಲಿದೆ. ನಾಲ್ಕನೇ ಟಿ20 ಪಂದ್ಯ ಶುಕ್ರವಾರ ನಡೆಯಲಿದೆ.