ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
ಸುದ್ದಿಒನ್ : 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋತ ನಂತರ ಟೀಂ ಇಂಡಿಯಾ ಮೊದಲ ಸರಣಿಯಲ್ಲಿ ಶುಭಾರಂಭ ಮಾಡಿದೆ.
ಆಸ್ಟ್ರೇಲಿಯ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ 2 ವಿಕೆಟ್‌ಗಳಿಂದ ಜಯ ಸಾಧಿಸಿತು. ಕೊನೆಗೆ ಬಾರಿ ಕುತೂಹಲ ಮೂಡಿಸಿತ್ತು. ಆದರೆ ರಿಂಕು ಸಿಂಗ್ ಪಂದ್ಯ ಮುಗಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ ನೀಡಿದ 209 ರನ್ ಗಳ ಗುರಿಯನ್ನು ಭಾರತ 19.5 ಓವರ್ ಗಳಲ್ಲಿ ಮುಗಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಆಸೀಸ್ ಸ್ಮಿತ್ ಅರ್ಧಶತಕ ಸಿಡಿಸಿ ಮಿಂಚಿದರು.
2023ರ ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ಪ್ರಭಾವ ಬೀರದ ಜೋಶ್ ಇಂಗ್ಲಿಸ್ ಈ ಪಂದ್ಯದಲ್ಲಿ ಮಿಂಚಿದರು. ಟೀಂ ಇಂಡಿಯಾದ ಬೌಲರ್‌ಗಳ ಮೇಲೆ ಸಿಕ್ಸರ್ ಮತ್ತು ಬೌಂಡರಿಗಳ ದಾಳಿ ನಡೆಸಿದರು. ಈ ಪಂದ್ಯದಲ್ಲಿ ಅವರು 47 ಎಸೆತಗಳಲ್ಲಿ ಶತಕ ದಾಖಲಿಸಿದರು. ಕೊನೆಯಲ್ಲಿ ಟಿಮ್ ಡೇವಿಡ್ (19) ಕೂಡ ಬ್ಯಾಟ್ ಬೀಸಿದರು. ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು.
ಬಳಿಕ ಬೃಹತ್ ಗುರಿಯೊಂದಿಗೆ ಕಣಕ್ಕೆ ಇಳಿದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ರುತುರಾಜ್ ಗಾಯಕ್ವಾಡ್ ಸಮನ್ವಯದ ಕೊರತೆಯಿಂದ ಒಂದೇ ಒಂದು ಎಸೆತವನ್ನು ಎದುರಿಸಲಾಗದೆ ರನೌಟ್ ಆದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಶ್ವಾಲ್ ಕೂಡ 8 ಎಸೆತಗಳಲ್ಲಿ 21 ರನ್ ಗಳಿಸಿ ಕ್ಯಾಚಿತ್ತು ಔಟಾದರು. ಈ ಹಂತದಲ್ಲಿ ಕ್ರೀಸ್ ಗೆ ಬಂದ ಸೂರ್ಯಕುಮಾರ್ ಯಾದವ್ ಅವರು ಎಂದಿನ ಶೈಲಿಯಲ್ಲಿಯೇ ಉತ್ತಮ ಪ್ರದರ್ಶನ ನೀಡಿದರು. ಇಶಾನ್ ಕಿಶನ್ ಜೊತೆ ಹಿಗ್ಗಾಮುಗ್ಗಾ ಬೌಂಡರಿ ಬಾರಿಸಿದರು.
ಇವರಿಬ್ಬರೂ ವೇಗವಾಗಿ ರನ್ ಗಳಿಸಿದ್ದರಿಂದ ಭಾರತ ಗುರಿಯತ್ತ ಸಾಗಿತು. ಇಶಾನ್ ಕಿಶನ್ 39 ಎಸೆತಗಳಲ್ಲಿ 58 ರನ್ ಗಳಿಸಿ ಔಟಾದರು. ಅದಾದ ನಂತರ ಮುನ್ನುಗ್ಗುತ್ತಲೇ ಬಂದ ಸೂರ್ಯ ತಂಡಕ್ಕೆ ಜಯ ತಂದುಕೊಟ್ಟರು. ಗೆಲುವಿಗೆ ಇನ್ನೂ 15 ರನ್‌ಗಳ ಅಗತ್ಯವಿದ್ದಾಗ ಕ್ಯಾಚ್ ಔಟ್ ಆದರು. ಇಲ್ಲದಿದ್ದರೆ, ಅವರು ಮಾಡಬೇಕಾದ ಕೆಲಸವನ್ನು ಇನ್ನೂ ಬೇಗನೇ ಪೂರ್ಣಗೊಳಿಸುತ್ತಿದ್ದರು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 42 ಎಸೆತಗಳಲ್ಲಿ 80 ರನ್ ಗಳಿಸಿದರು.(4 ಸಿಕ್ಸರ್ ಮತ್ತು 9 ಬೌಂಡರಿಗಳು)
ಕೊನೇ ಓವರ್‌ನಲ್ಲಿ ಕೊಂಚ ಆತಂಕವೆನಿಸಿದರೂ ರಿಂಕು ಸಿಂಗ್ ಸಿಕ್ಸ್ ಹೊಡೆಯುವ ಮೂಲಕ ಪಂದ್ಯ ಮುಗಿಸಿದರು. ಇನ್ನಿಂಗ್ಸ್‌ನ ಕೊನೆಯ ಎಸೆತಕ್ಕೆ ಕೇವಲ ಒಂದು ರನ್ ಇರುವಾಗ ರಿಂಕು ಸಿಂಗ್ ಸಿಕ್ಸರ್ ಬಾರಿಸಿದರು. ಆದರೆ, ಇದು ನೋಬಾಲ್. ಭಾರತ ನೊಬಾಲ್ ನಿಂದಲೇ ಒಂದು ರನ್ ಗಳಿಸಿ ಗೆದ್ದಿತು. ಕೊನೆಗೆ ಹೊಡೆದ 6 (ಆರು) ರನ್‌ಗಳು ತಂಡದ ಮೊತ್ತಕ್ಕಾಗಲೀ, ರಿಕುಸಿಂಗ್ ಅವರ ವೈಯಕ್ತಿಕ ಮೊತ್ತಕ್ಕಾಗಲೀ ಸೇರಲಿಲ್ಲ.
ಒಟ್ಟಿನಲ್ಲಿ ಭಾರತ 19.5 ಓವರ್‌ಗಳಲ್ಲಿ ಗುರಿ ಬೆನ್ನಟ್ಟಿತು. 2 ವಿಕೆಟ್‌ಗಳಿಂದ ಗೆದ್ದು ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಟಿ20 ಪಂದ್ಯ ನವೆಂಬರ್ 26 ರಂದು ತಿರುವನಂತಪುರಂನಲ್ಲಿ ನಡೆಯಲಿದೆ.