For the best experience, open
https://m.suddione.com
on your mobile browser.
Advertisement

IND vs NZ ODI ವಿಶ್ವಕಪ್ 2023 : ಮಿಂಚಿದ ಕೊಹ್ಲಿ, ಮುಂದುವರೆದ ಭಾರತದ ವಿಜಯಯಾತ್ರೆ

08:29 AM Oct 23, 2023 IST | suddionenews
ind vs nz odi ವಿಶ್ವಕಪ್ 2023   ಮಿಂಚಿದ ಕೊಹ್ಲಿ  ಮುಂದುವರೆದ ಭಾರತದ ವಿಜಯಯಾತ್ರೆ
Advertisement

Advertisement

  • IND vs NZ ODI ವಿಶ್ವಕಪ್ 2023: ODI ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ಅನ್ನು ಸೋಲಿಸಿ ಸತತ ಐದನೇ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ತಲುಪಿದೆ.

IND vs NZ ODI ವರ್ಲ್ಡ್ ಕಪ್ 2023: ODI ವರ್ಲ್ಡ್ ಕಪ್ 2023 ಮೆಗಾಟೂರ್ನಮೆಂಟ್‌ನಲ್ಲಿ ಟೀಮ್ ಇಂಡಿಯಾದ ವಿಜಯ ಯಾತ್ರೆ ಮುಂದುವರೆದಿದೆ. ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ಸತತ ಐದನೇ ಪಂದ್ಯವನ್ನು ಗೆದ್ದುಕೊಂಡಿತು.

ವಿಶ್ವಕಪ್ ಅಂಗವಾಗಿ ನಿನ್ನೆ (ಅಕ್ಟೋಬರ್ 22) ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು.

Advertisement

274 ರನ್‌ಗಳ ಗುರಿ ಬೆನ್ನತ್ತಿದ ಭಾರತ ಇನ್ನೂ ಎರಡು ಓವರ್‌ಗಳು ಬಾಕಿ ಉಳಿದಿರುವಂತೆಯೇ ಗೆಲುವಿನ ನಗೆ ಬೀರಿತು. ಟೀಂ ಇಂಡಿಯಾ 48 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 274 ರನ್ ಗಳಿಸಿ ಗೆಲುವು ಸಾಧಿಸಿತು. ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (104 ಎಸೆತಗಳಲ್ಲಿ 95 ರನ್) ಮತ್ತೊಂದು ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಆದರೆ, ಶತಕದಂಚಿಗೆ ಬಂದು ಔಟಾಗಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ನಿರಾಸೆಯುಂಟುಮಾಡಿತು. ನಾಯಕ ರೋಹಿತ್ ಶರ್ಮಾ (46) ಮತ್ತು ರವೀಂದ್ರ ಜಡೇಜಾ (ಔಟಾಗದೆ 39) ಮಿಂಚಿದರು.  ಕಿವೀಸ್ ಬೌಲರ್‌ಗಳಲ್ಲಿ ಲಾಕಿ ಫರ್ಗುಸನ್ ಎರಡು ವಿಕೆಟ್, ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ ಮತ್ತು ಸ್ಯಾಂಟ್ನರ್ ತಲಾ ಒಂದು ವಿಕೆಟ್ ಪಡೆದರು.

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 273 ರನ್‌ಗಳಿಗೆ ಆಲೌಟ್ ಆಯಿತು . ಡ್ಯಾರಿಲ್ ಮಿಚೆಲ್ (130) ಶತಕದೊಂದಿಗೆ ಮಿಂಚಿದರು. ರಚಿನ್ ರವೀಂದ್ರ (75) ಉತ್ತಮ ಇನಿಂಗ್ಸ್ ಆಡಿದರು. ಈ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಅಖಾಡಕ್ಕಿಳಿದ ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಐದು ವಿಕೆಟ್ ಕಬಳಿಸಿ ಬಲಿಷ್ಠ ಕಿವೀಸ್ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

ಕುಲದೀಪ್ ಯಾದವ್ ಎರಡು, ಸಿರಾಜ್ ಮತ್ತು ಬುಮ್ರಾ ತಲಾ ಎರಡು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 10 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ತಲುಪಿದ್ದು, ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ನ್ಯೂಜಿಲೆಂಡ್ ಅನ್ನು ಕೆಳಕ್ಕೆ ತಳ್ಳಿದೆ.

274 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (46) ಹಾಗೂ ಶುಭಮನ್ ಗಿಲ್ (26) ಉತ್ತಮ ಆರಂಭ ನೀಡಿದರು. ಭಾರತ 10 ಓವರ್‌ಗಳಲ್ಲಿ 63 ರನ್ ಗಳಿಸಿತು. ಆದರೆ, 12ನೇ ಓವರ್ ನಲ್ಲಿ ಫರ್ಗುಸನ್ ಬೌಲಿಂಗ್ ನಲ್ಲಿ ರೋಹಿತ್ ಔಟಾದರು. ಗಿಲ್ ಕೂಡ ಸ್ವಲ್ಪ ಹೊತ್ತಿನ ನಂತರ ಪೆವಿಲಿಯನ್ ಗೆ ತೆರಳಿದರು. ಶ್ರೇಯಸ್ ಅಯ್ಯರ್ (33) ಕೆಲಹೊತ್ತು ಮಿಂಚಿ ಔಟಾದರು. ಮತ್ತೊಂದೆಡೆ ಕಿಂಗ್ ವಿರಾಟ್ ಕೊಹ್ಲಿ ತಮ್ಮದೇ ಶೈಲಿಯಲ್ಲಿ ಇನಿಂಗ್ಸ್ ಆಡಿದರು. ಕೊಹ್ಲಿಗೆ ಕೆಲಕಾಲ ನೆರವಾದ ಕೆಎಲ್ ರಾಹುಲ್ (27) ಕೂಡ 33ನೇ ಓವರ್ ನಲ್ಲಿ ಪೆವಿಲಿಯನ್ ಸೇರಿದರು.
ಏಕದಿನ ವಿಶ್ವಕಪ್ ನಲ್ಲಿ ಚೊಚ್ಚಲ ಬಾರಿಗೆ ಕಣಕ್ಕೆ ಇಳಿದಿದ್ದ ಸೂರ್ಯಕುಮಾರ್ ಯಾದವ್ (2) ರನೌಟ್ ಆಗಿ ನಿರಾಸೆ ಮೂಡಿಸಿದರು. ಒಂದು ಹಂತದಲ್ಲಿ ಭಾರತ 191 ರನ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡು ಆತಂಕದಲ್ಲಿತ್ತು. ಆ ವೇಳೆ ವಿರಾಟ್ ಕೊಹ್ಲಿ ಜಡೇಜಾ ಜೊತೆಗೆ ಪರಿಸ್ಥಿತಿಗೆ ತಕ್ಕಂತೆ ಆಡಿದ್ದರು. ಹಂತಹಂತವಾಗಿ ಸ್ಕೋರ್ ಬೋರ್ಡ್ ಮುಂದಕ್ಕೆ ಸರಿಸಿ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. ವಿರಾಟ್ 60 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ನಂತರ ಅವರು ಆಕ್ರಮಣಕಾರಿ ಆಟವಾಡಿದರು. ಕೊಹ್ಲಿ ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟುವಾಗ  48ನೇ ಓವರ್ ನಲ್ಲಿ ಕೊಹ್ಲಿ ಬೃಹತ್ ಶಾಟ್ ಗೆ ಯತ್ನಿಸಿ ಕ್ಯಾಚಿತ್ತು ಔಟಾದರು. ಕೊನೆಯವರೆಗೂ ಉಳಿದ ಜಡೇಜಾ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 273 ರನ್ ಗಳಿಗೆ ಆಲೌಟ್ ಆಯಿತು.
ಡ್ಯಾರಿಲ್ ಮಿಚೆಲ್ (130) ಮತ್ತು ರಚಿನ್ ರವೀಂದ್ರ (75) ಬಿಟ್ಟರೆ ಉಳಿದ ಕಿವೀಸ್ ಬ್ಯಾಟ್ಸ್ ಮನ್ ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಭಾರತದ ಬೌಲರ್ ಮೊಹಮ್ಮದ್ ಶಮಿ ಐದು ವಿಕೆಟ್‌ಗಳೊಂದಿಗೆ ನ್ಯೂಜಿಲೆಂಡ್‌ಗೆ ಆಘಾತ ನೀಡಿದರು. ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಭಾರತ ಮುಂದಿನ ODI ವಿಶ್ವಕಪ್‌ನಲ್ಲಿ ಅಕ್ಟೋಬರ್ 29 ರಂದು ಇಂಗ್ಲೆಂಡ್ ಅನ್ನು ಎದುರಿಸಲಿದೆ.

Tags :
Advertisement