ಇತಿಹಾಸ ಸೃಷ್ಟಿಸಿ ಹೊಸ ದಾಖಲೆ ಬರೆದ ಬಿಲ್ಲುಗಾರ್ತಿ ಅದಿತಿ ಗೋಪಿಚಂದ್ ಸ್ವಾಮಿ
ಭಾರತೀಯ ಮಹಿಳಾ ಬಿಲ್ಲುಗಾರ್ತಿ ಅದಿತಿ ಗೋಪಿಚಂದ್ ಸ್ವಾಮಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಅತ್ಯಂತ ಕಿರಿಯ ಬಿಲ್ಲುಗಾರ್ತಿ (17) ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಬರ್ಲಿನ್‌ನಲ್ಲಿ ನಡೆದ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಅವರು ಈ ಸಾಧನೆಗೆ ಪಾತ್ರರಾದರು. ಬಿಲ್ಲುಗಾರಿಕೆಯಲ್ಲಿ ಭಾರತದ ಪರವಾಗಿ ಮೊದಲ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಇಂದು (ಆಗಸ್ಟ್ 5) ನಡೆದ ಫೈನಲ್ ನಲ್ಲಿ ಮೆಕ್ಸಿಕೋದ ಆಂಡ್ರಿಯಾ ಬೆಸೆರಾ ಅವರನ್ನು 149-47 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದು ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಇದೇ ಸ್ಪರ್ಧೆಯಲ್ಲಿ ಆಂಧ್ರಪ್ರದೇಶದ ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ವೆನ್ನಮ್ ಮತ್ತು ಪರ್ನೀತ್ ಕೌರ್ ಅವರು ಶುಕ್ರವಾರ ಮಹಿಳೆಯರ ತಂಡ ವಿಭಾಗದಲ್ಲಿ ಚಿನ್ನ ಗೆದ್ದರು. ಇದಾದ ನಂತರ ಅದಿತಿ ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟರು.
ಈ ವರ್ಷ ಉತ್ತಮ ಫಾರ್ಮ್‌ನಲ್ಲಿರುವ ಅದಿತಿ ಕಳೆದ ತಿಂಗಳು ನಡೆದ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕ ಮತ್ತು ತಂಡ ವಿಭಾಗಗಳಲ್ಲಿ ಚಿನ್ನ ಗೆದ್ದಿದ್ದರು. ಕ್ವಾರ್ಟರ್ ಫೈನಲ್ ಶೂಟ್-ಆಫ್‌ನಲ್ಲಿ ಅದಿತಿ ನೆದರ್ಲೆಂಡ್ಸ್‌ನ ಸನ್ನೆ ಡಿ ಲಾಟ್ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಅದಿತಿ ಸಹ ಆಂಧ್ರದ ಹುಡುಗಿ ಜ್ಯೋತಿ ಸುರೇಖಾ ವಿರುದ್ಧ ಗೆದ್ದು ಫೈನಲ್ ತಲುಪಿದ್ದರು.