ಡಿಸೆಂಬರ್ 7ರ ಬಳಿಕ ಯತ್ನಾಳ್, ಸೋಮಶೇಖರ್ ಭವಿಷ್ಯ ನಿರ್ಧಾರ : ಏನಂದ್ರು ವಿಜಯೇಂದ್ರ..?
ಕಲಬುರಗಿ: ರಾಜ್ಯ ಬಿಜೆಪಿಯಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧವೇ ಯತ್ನಾಳ್ ಬಣ ಪಣ ತೊಟ್ಟಿನಿಂತಿದೆ. ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸುತ್ತೇವೆ ಎನ್ನುತ್ತಿದ್ದಾರೆ. ಈ ಬೆಳವಣಿಗೆ ಈಗಾಗಲೇ ಹೈಕಮಾಂಡ್ ವರೆಗೂ ತಲುಪಿದೆ. ಇಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ದೆಹಲಿಗೆ ಹೋಗಿದ್ದಾರೆ. ಆದರೆ ರಾಜ್ಯಾಧ್ಯಜ್ಷರಾಗಿರುವ ವಿಜಯೇಂದ್ರ ಅವರಿಗೆ ಈ ಬಗ್ಗೆ ಮಾಹಿತಿ ಇದ್ದಂತೆ ಕಾಣಿಸುತ್ತಿಲ್ಲ. ಈ ಬಗ್ಗೆ ಮಾತನಾಡಿರುವ ಬಿವೈ ವಿಜಯೇಂದ್ರ ಅವರು, ವರಿಷ್ಠರ ಭೇಟಿಗಾಗಿ ಅಶೋಕ್ ಅವರು ಹೋಗಿರಬಹುದು. ಅದರ ಬಗ್ಗೆ ಮಾಹಿತಿ ನನಗೆ ಇಲ್ಲ ಎಂದಿದ್ದಾರೆ.
ಇನ್ನು ಎಸ್ ಸೋಮಶೇಖರ್ ಅವರು ಕಾಂಗ್ರೆಸ್ ಜೊತೆಗೆ ಹೆಚ್ಚು ಗುರುತಿಸಿಕೊಳ್ಳುತ್ತಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದು, ಡಿಸೆಂಬರ್ 7ರಂದು ಬೆಂಗಳೂರಿನಲ್ಲಿ ಕೋರ್ ಕಮಿಟಿ ನಡೆಯಲಿದೆ. ಇವೆಲ್ಲಾ ವಿಚಾರಗಳನ್ನು ಅಲ್ಲಿ ಚರ್ಚೆ ಮಾಡಲಾಗುತ್ತದೆ. ಪತ್ರಕರ್ತರು ಮಾತ್ರವಲ್ಲ ಕಾರ್ಯಕರ್ತರು ಕೂಡ ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಮುಖಂಡರು ಎಷ್ಟೇ ದೊಡ್ಡವರಿದ್ದರು ಕೂಡ ಪಕ್ಷ ವಿರೋಧಿ ಕೆಲಸ ಮಾಡಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂಬ ಅಪೇಕ್ಷೆ ಹಿರಿಯರಲ್ಲಿ ಇದೆ. ಕೋರ್ ಕಮಿಟಿಯಲ್ಲಿ ಕೂತು ಆ ಬಗ್ಗೆ ಚರ್ಚೆ ಮಾಡಿ ದೆಹಲಿಗೆ ಅದರ ವರದಿಯನ್ನು ನೀಡುತ್ತೇವೆ.
ಇದೇ ವೇಳೆ ಯತ್ನಾಳ್ ಅವರ ಬಗ್ಗೆಯೂ ಮಾತನಾಡಿ, ಡಿಸೆಂಬರ್ 7ರಂದು ಎಲ್ಲಾ ವಿಚಾರಗಳು ಚರ್ಚೆಯಾಗುತ್ತವೆ. ಬಳಿಕ ಎಲ್ಲವೂ ಸರಿಯಾಗುತ್ತದೆ. ಈಗಾಗಲೇ ಹೈಕಮಾಂಡ್ ಗಮನಕ್ಕೆ ಎಲ್ಲಾ ವಿಚಾರಗಳು ಬಂದಿವೆ. ದಿನಬೆಳಗಾದರೇ ಈ ವಿಚಾರವನ್ನೇ ಚರ್ಚೆ ಮಾಡುತ್ತಾ ಕೂರುವುದಿಲ್ಲ. ನೋಡೊಇಸ್ ಕೂಡ ಕೊಟ್ಟಿದ್ದಾರೆ. ಅಂತಿಮವಾಗಿ ವರಿಷ್ಠರು ಏನು ಹೇಳುತ್ತಾರೆ ಅದೇ ಆಗುತ್ತದೆ ಎಂದಿದ್ದಾರೆ.