ಮಂಡ್ಯ ಗೆಲುವಿಗಾಗಿ ಕುಮಾರಸ್ವಾಮಿ ಅವರೇ ಅಖಾಡಕ್ಕಿಳಿಯುತ್ತಾರಾ..?
ಮಂಡ್ಯ: ಜೆಡಿಎಸ್ ಭದ್ರಕೋಟೆ ಎಂದೇ ಗಟ್ಟಿಯಾಗಿದ್ದ ಕೋಟೆಯನ್ನ ಭೇದಿಸಿದ್ದು ನಟಿ ಸುಮಲತಾ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ನಿಂತು ಮಂಡ್ಯ ಜನರ ಮನಸ್ಸನ್ನು ಗೆದ್ದಿದ್ದರು. ಜೆಡಿಎಸ್ ಭದ್ರಕೋಟೆಯಲ್ಲಿ ಸುಮಲತಾ ಗೆದ್ದು ಬೀಗಿದ್ದರು. ಅಂಬರೀಶ್ ಅಭಿಮಾನ ಮೆರೆದಿತ್ತು. ಸ್ವತಂತ್ರವಾಗಿ ಗೆದ್ದ ಸುಮಲತಾ ಬಳಿಕ ಬಿಜೆಪಿ ಸೇರಿದ್ದರು. ಇದೀಗ ಆ ಕ್ಷೇತ್ರವೂ ಕೈ ತಪ್ಪುವ ಸಾಧ್ಯತೆ ಇದೆ.
ಮಗನ ರಾಜಕೀಯ ಭವಿಷ್ಯಕ್ಕೋಸ್ಕರ ಮಂಡ್ಯ ಜಿಲ್ಲೆಯಲ್ಲಿ ನಿಲ್ಲಿಸಿದರು. ನಿಖಿಲ್ ಕುಮಾರಸ್ವಾಮಿಗಾಗಿ ಹಲವು ತಂತ್ರಗಳನ್ನು ಮಾಡಿದ್ದರು. ಆದರೆ ಈ ಅವೆಲ್ಲವುಗಳ ನಡುವೆಯೂ ಸುಮಲತಾ ಗೆದ್ದು ಬೀಗಿದ್ದರು. ಈ ಸೇಡು ತೀರಿಸಿಕೊಂಡು, ಮತ್ತೆ ಮಂಡ್ಯವನ್ನು ತಮ್ಮ ವಶ ಮಾಡಿಕೊಳ್ಳಲು ಹೊರಟಿದ್ದಾರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯೇ ಸ್ಪರ್ಧೆ ಮಾಡುವುದು ಕೆಲ ಬೆಳವಣಿಗೆಯಿಂದಾನೇ ಪಕ್ಕಾ ಆಗಿದೆ.
ಈ ಬಾರಿಯೂ ನಿಖಿಲ್ ಅವರನ್ನೇ ನಿಲ್ಲಿಸಿ ಎಂದು ಕೆಲ ಕಾರ್ಯಕರ್ತರು ಅಭಿಪ್ರಾಯ ತಿಳಿಸಿದ್ದಾರೆ. ರಾಜಕೀಯ ಅಂತ ಪ್ರವೇಶ ಮಾಡಿ, ಸ್ಪರ್ಧೆ ಎಂದು ನಿಂತ ಎರಡು ಚುನಾವಣೆಯಲ್ಲೂ ನಿಖಿಲ್ ಸೋಲು ಕಂಡಿದ್ದಾರೆ. ಮೂರನೇ ಬಾರಿಯೂ ಸೋತರೆ ರಾಜಕೀಯ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂಬ ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಇನ್ನು ಐದು ವರ್ಷ ರಾಜಕೀಯಕ್ಕೆ ಬರಲ್ಲ, ಸಿನಿಮ ಮಾಡುತ್ತೀನಿ ಅಂತ ನಿಖಿಲ್ ನಿಶ್ಚಯ ಮಾಡಿದ್ದಾರೆ. ಹೀಗಾಗಿ ಮಂಡ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡುವ ಲಕ್ಷಣಗಳು ಕಾಣಿಸುತ್ತಿವೆ. ಅದರ ಭಾಗವಾಗಿಯೇ ಮಂಡ್ಯ, ಮದ್ದೂರು, ಕೆ ಆರ್ ಪೇಟೆ ಸೇರಿದಂತೆ ಲೋಕಸಭಾ ಕ್ಷೇತ್ರಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ. ಮದುವೆ, ಸಭೆ, ಸಮಾರಂಭಗಳಲ್ಲಿ ಭಾಗಿಯಾಗಿ, ಜನರಿಗೆ ಹತ್ತಿರವಾಗುತ್ತಿದ್ದಾರೆ.