ಲೋಕಸಭಾ ಚುನಾವಣೆಗೆ ಹೆಚ್ ಡಿ ದೇವೇಗೌಡರು ಸ್ಪರ್ಧಿಸುತ್ತಾರಾ..? ದೊಡ್ಡಗೌಡರ ನಿರ್ಧಾರವೇನು..?
ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷದಲ್ಲಿಯೇ ಸಾಕಷ್ಟು ವಿರೋಧವಿದ್ದರು ಸಹ ಬಿಜೆಪಿ ಜೊತೆಗೆ ಕೈ ಜೋಡಿಸಿರುವ ಜೆಡಿಎಸ್ ಸಾಕಷ್ಟು ಆಕ್ಟೀವ್ ಆಗಿದೆ. ಅದರಲ್ಲೂ ಕುಮಾರಸ್ವಾಮಿ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸ್ಪರ್ಧಿಸುವ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುವ ಹಠ ಹೊಂದಿದ್ದಾರೆ. ಈ ಬೆಳವಣಿಗೆಯ ನಡುವೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸಹ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತು ಇತ್ತು. ಈ ಬಗ್ಗೆ ದೊಡ್ಡಗೌಡ್ರೇ ಸ್ಪಷ್ಟನೆ ನೀಡಿದ್ದಾರೆ.
ಇಂದು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ದೇವೇಗೌಡ್ರು, ನನಗೆ 91 ವರ್ಷ ವಯಸ್ಸಾಗಿದೆ. ಜ್ಞಾಪಕ ಶಕ್ತಿ ಇದೆ. ಆದರೆ ಓಡಾಡಲು ಕಷ್ಟವಾಗುತ್ತದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿಲ್ಲ. ಇನ್ನೂ ಎರಡು ವರ್ಷಗಳ ಕಾಲ ರಾಜ್ಯಸಭಾ ಸದಸ್ಯ ಅವಧಿ ಇದೆ. ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಸ್ಪರ್ಧೆ ಇನ್ನೂ ನಿರ್ಧಾರ ಮಾಡಿಲ್ಲ. ಪ್ರಧಾನಿ ಮೋದಿ ಅವರು ಏನಾದರೂ ಹೇಳಿದರೆ ಅಮೇಲೆ ಕೂತು ನಿರ್ಧಾರ ಮಾಡುತ್ತೇನೆ ಎಂದಿದ್ದಾರೆ.
ಇದೇ ವೇಳೆ ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡುತ್ತಾರೆಂಬ ವಿಚಾರದ ಬಗ್ಗೆ ಕೇಳಿದಾಗ, ಪ್ರಧಾನಿ ನರೇಂದ್ರ ಮೋದಿಯವರ ಮನಸ್ಸಿನಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ. ಅವರು ಯಾವುದನ್ನು ಬಿಟ್ಟುಕೊಡುವುದಿಲ್ಲ. ಅವರ ಜೊತೆಗಿರುವ ಪೊಲೀಸರಿಗೂ ಗೊತ್ತಾಗುವುದಿಲ್ಲ. ಈ ವಿಚಾರ ನನ್ನ ಮುಂದೆ ಇನ್ನು ಚರ್ಚೆಯಾಗಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವರಾಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.