ಚಿನ್ನ-ಬೆಳ್ಳಿ ದರ ಅತಿ ವೇಗದಲ್ಲಿ ಏರಿಕೆಯಾಗುತ್ತಿರುವುದೇಕೆ..?
ಸುದ್ದಿಒನ್, ಬೆಂಗಳೂರು : ಚಿನ್ನ ಎಂದರೆ ಸಾಕು ಮಧ್ಯಮ ವರ್ಗ, ಬಡವರು ಬೆಚ್ಚಿ ಬೀಳುವಂತೆ ಆಗುತ್ತಿದೆ. ದಿನೇ ದಿನೇ ಏರಿಕೆಯಾಗುತ್ತಿರುವ ಚಿನ್ನ ಈಗ 7 ಸಾವಿರಕ್ಕೂ ಅಧಿಕವಾಗಿದೆ. ಚಿನ್ನ ತೆಗೆದುಕೊಂಡರೆ ಕಷ್ಟಕಾಲಕ್ಕೆ ಆಗುತ್ತದೆ ಎಂಬ ಮಾತು ಕೂಡ ಇದೆ. ಆದರೆ ಈಗ ಚಿನ್ನ ಕೊಳ್ಳುವುದೇ ಕಷ್ಟವಾಗಿದೆ. ಹಾಗಾದ್ರೆ ಇದ್ದಕ್ಕಿದ್ದ ಹಾಗೇ ಇಷ್ಟೊಂದು ಏರಿಕೆ ಕಾಣುವುದಕ್ಕೆ ಕಾರಣವಾದರೂ ಏನು ಗೊತ್ತಾ..?
22 ಕ್ಯಾರೆಟ್ ಚಿನ್ನದ ಬೆಲೆ ಈಗ 7 ಸಾವಿರ ಗಡಿ ದಾಟಿದೆ. ಹಾಗೇ 24 ಕ್ಯಾರೆಟ್ ಚಿನ್ನದ ದರ 7,700 ರೂಪಾಯಿ ಆಗಿದೆ. ಅತ್ಯಮೂಲ್ಯ ಸಂಪತ್ತಾದ್ದರಿಂದ ಎಲ್ಲರೂ ಶೇಖರಿಸಿಟ್ಟುಕೊಳ್ಳುವ ಪ್ರಯತ್ನ ಮಾಡ್ತಾರೆ. ಹೀಗಾಗಿ ಡಿಮ್ಯಾಂಡ್ ಜಾಸ್ತಿ ಇರುವ ಕಾರಣ, ಬೆಲೆಯೂ ಜಾಸ್ತಿಯೇ ಸರಿ. ಇಸ್ರೇಲ್ ಮತ್ತು ಹಿಜ್ಬೊಲ್ಲಾ ಮಧ್ಯೆ ಪೂರ್ಣಪ್ರಮಾಣದಲ್ಲಿ ಯುದ್ಧ ಶುರುವಾದರೆ ಪಶ್ಚಿಮ ಏಷ್ಯಾ ಮತ್ತು ಮಧ್ಯಪ್ರಾಚ್ಯ ಭಾಗದಲ್ಲಿ ಸೂಕ್ಷ್ಮ ವಾತಾವರಣ ನೆಲಸುತ್ತದೆ. ಈ ಜಾಗತಿಕ ರಾಜಕೀಯ ಬಿಕ್ಕಟ್ಟಿನ ಸ್ಥಿತಿಯಲ್ಲಿ ಆರ್ಥಿಕತೆ ಮಂದಗೊಳ್ಳುತ್ತದೆ. ಇದು ಹೂಡಿಕೆದಾರರನ್ನು ಚಿನ್ನದತ್ತ ಆಕರ್ಷಿಸುತ್ತಿರಬಹುದು. ಇದರಿಂದ ಚಿನ್ನದ ಬೆಲೆ ಹೆಚ್ಚುತ್ತಿರಬಹುದನ್ನು ಕೆಲವರು ಹೇಳುತ್ತಾರೆ.
ಇನ್ನು ಅಮೆರಿಕಾದ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರ ಕಡಿಮೆಗೊಳಿಸಿದೆ. ಚೀನಾದ ಸೆಂಟ್ರಲ್ ಬ್ಯಾಂಕ್ ಕೂಡ ಬಡ್ಡಿದರವನ್ನು ಕಡಿಮೆ ಮಾಡಿದೆ. ಈ ರೀತಿ ಕೆಲವು ಸೆಂಟ್ರಲ್ ಬ್ಯಾಂಕ್ ಗಳು ಬಡ್ಡಿದರವನ್ನು ಕಡಿಮೆ ಮಾಡಿದೆ. ಜನರ ಬಳಿ ಹೆಚ್ಚು ಹಣ ಸಿಗುತ್ತಿರುವ ಕಾರಣ ಚಿನ್ನ ಬೆಳ್ಳಿಯತ್ತ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಚಿನ್ನದ ಬೆಲೆ ಏರುತ್ತಿದೆ ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ. ಆದರೆ ಇದು ಬಡವರ ಚಿನ್ನದ ಕನಸಿಗೆ ಕನ್ನ ಹಾಕುತ್ತಿದೆ.