ಮೈಸೂರಿನಲ್ಲಿ ಅಭ್ಯರ್ಥಿ ಬದಲಾಯಿಸಿದ್ದೇಕೆ..? ಯದುವೀರ್ ಗೆ ಟಿಕೆಟ್ ಕೊಟ್ಟಿದ್ದೇಕೆ..?: ಸ್ಪಷ್ಟನೆ ನೀಡಿದ ವಿಜಯೇಂದ್ರ
ಬೆಂಗಳೂರು: ಲೋಕಸಭಾ ಚುನಾವಣೆಯ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಅದರಲ್ಲೂ ಈ ಬಾರಿ ಬಿಜೆಪಿಯಲ್ಲಿ ಹೊಸಬರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಘಟಾನುಘಟಿಗಳಿಗೆ ಟಿಕೆಟ್ ಮಿಸ್ ಆಗಿದೆ. ಮೈಸೂರಿನಿಂದ ಪ್ರತಾಪ್ ಸಿಂಹ ಅವರಿಗೇನೆ ಟಿಕೆಟ್ ಸಿಗುತ್ತದೆ ಎಂದು ಭಾವಿಸಿದ್ದರು, ಆ ನಿರೀಕ್ಷೆ ಸುಳ್ಳಾಗಿದೆ. ರಾಜವಂಶಸ್ಥ ಯದುವೀರ್ ಅವರಿಗೆ ಟಿಕೆಟ್ ನೀಡಲಾಗಿದೆ. ಸಿಂಹ ಬಿಟ್ಟು ರಾಜವಂಶಸ್ಥರಿಗೆ ಟಿಕೆಟ್ ನೀಡಿದ್ದು ಯಾಕೆ ಎಂಬ ಪ್ರಶ್ನೆ ಸುಮಾರು ಜನರಿಗೆ ಇದೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಯದುವೀರ್ ಅವರನ್ನು ಜನ ನೋಡುವ ರೀತಿಯೇ ಬೇರೆಯದ್ದಾಗಿದೆ. ಅವರನ್ನು ಯಾವುದೋ ಒಂದು ಜಾತಿ ಎಂಬಂತೆ ನೋಡುತ್ತಿಲ್ಲ. ಮಹಾರಾಜ ನಾಲ್ವಡಿ ಒಡೆಯರ್ ಮಾಡಿರುವಂತ ಕೆಲಸಗಳು ಸಿಕ್ಕಾಪಟ್ಟೆ ಇದಾವೆ. ಕೆರೆಕಟ್ಟೆಗಳನ್ನು ಕಟ್ಟಿಸಿ, ಜನತೆಗೆ ಅನುಕೂಲ ಮಾಡಿದ್ದಾರೆ.
ಕನ್ನಂಬಾಡಿ ಕಟ್ಟೆಯನ್ನು ಕಟ್ಟಿದವರು ಅವರೇ. ಇವತ್ತು ಜನ ಅದನ್ನೆಲ್ಲಾ ನೆನೆಸಿಕೊಳ್ಳುತ್ತಾರೆ. ಇಂದು ಜಾತಿ ಅಂತಲ್ಲ, ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡದವರು ಕೂಡ ನೆನೆಸಿಕೊಳ್ಳುತ್ತಾರೆ. ಒಂದು ಕಡೆ ನರೇಂದ್ರ ಮೋದಿಯವರ ಜನಪ್ರಿಯತೆ, ಕೇಂದ್ರ ಸರ್ಕಾರದ 10 ವರ್ಷದ ಸಾಧನೆ. ಮಹಾರಾಜರಿಗೂ ಒಂದು ಹೆಸರಿದೆ. ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ಅವರಿಗೆ ಟಿಕೆಟ್ ನೀಡಲಾಗಿದೆ. ಬಹುಶಃ ನನಗೆ ತಿಳಿದಿರುವಂತೆ ಮಹಾರಾಜರು ಎರಡು ಲಕ್ಷ ಮತದ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಮೈಸೂರು ಭಾಗದಲ್ಲಿ ಅಭ್ಯರ್ಥಿಯನ್ನು ಬದಲಾಯಿಸಿದ್ದರ ಬಗ್ಗೆ ಮಾಹಿತಿ ನೀಡಿದ್ದಾರೆ.